ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮಹಾಮಾರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಾಳೆಯಿಂದ ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ.
ರಾಜ್ಯದಲ್ಲಿ ಪ್ರತಿ ದಿನ 50 ಸಾವಿರದ ಆಸುಪಾಸಿನಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸರ್ಕಾರ ಕರ್ಫ್ಯೂ ಜಾರಿಗೊಳಿಸಿತ್ತು. ಆದರೆ, ಇದರಿಂದ ಜನ ಬಗ್ಗದ ಕಾರಣ, ಸೋಂಕು ಹತೋಟಿಗೆ ಬರಲಿಲ್ಲ. ಹೀಗಾಗಿ ನಾಳೆಯಿಂದ 14 ದಿನಗಳ ಕಾಲ ಅಂದರೆ ಮೇ. 24ರ ವರೆಗೂ ಅನ್ವಯವಾಗುವಂತೆ ಕಠಿಣ ಲಾಕ್ ಡೌನ್ ಜಾರಿಗೊಳಿಸಿದೆ.
ಈ ಬಾರಿಯ ಲಾಕ್ ಡೌನ್ ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲದೇ, ಹಲವಾರು ಕಠಿಣ ನಿಯಮಗಳು ಜಾರಿಯಲ್ಲಿರಲಿವೆ.
ನಾಳೆಯಿಂದ 14 ದಿನಗಳ ಕಾಲ ಆಸ್ಪತ್ರೆ, ಮೆಡಿಕಲ್, ನ್ಯಾಯಬೆಲೆ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಹಾಲಿನ ಅಂಗಡಿಗಳು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ತೆರೆದಿರುತ್ತವೆ. ಹಾಪ್ ಕಾಮ್ಸ್, ಹಣ್ಣು-ತರಕಾರಿ ಅಂಗಡಿಗಳು ಬೆಳಿಗ್ಗೆ 10ರ ವರೆಗೆ ಮಾತ್ರ ತೆರೆದಿರುತ್ತವೆ.
ತಳ್ಳುಗಾಡಿಯಲ್ಲಿ ಹಣ್ಣು – ತರಕಾರಿ ಮಾರಾಟ ಮಾಡುವವರು ಸಂಜೆ 6ರ ವರೆಗೆ ಮಾತ್ರ ಕಾರ್ಯ ನಿರ್ವಹಿಸಬೇಕು.
ದಿನಸಿ – ಮಾಂಸದ ಅಂಗಡಿಗಳು ಬೆಳಿಗ್ಗೆ 10ರವರೆಗೆ ಮಾತ್ರ ತೆರೆದಿರಬೇಕು. ಹೊಟೇಲ್ ಗಳಲ್ಲಿ ಇಡೀ ದಿನ ಪಾರ್ಸೆಲ್ ವ್ಯವಸ್ಥೆ ಇರುತ್ತದೆ. ಹೋಂ ಡೆಲಿವರಿ ಇರಲಿದೆ. ಮದ್ಯ ಪಾರ್ಸೆಲ್ ಗೆ ಬೆಳಿಗ್ಗೆ 10ರ ವರೆಗೆ ಅವಕಾಶವಿರುತ್ತದೆ. ಮನೆಯಲ್ಲಿ ಮಾತ್ರ ಮದುವೆ ಮಾಡಿಕೊಳ್ಳಬೇಕು. ಕೇವಲ 40 ಜನರಿಗೆ ಮಾತ್ರ ಅವಕಾಶವಿದೆ. ಅಂತ್ಯ ಸಂಸ್ಕಾರದಲ್ಲಿ 5ಕ್ಕಿಂತ ಹೆಚ್ಚಿನ ಜನರು ಭಾಗವಹಿಸಿವಂತಿಲ್ಲ.
ಆಹಾರ ಸಂಸ್ಕರಣಾ ಘಟಕ, ರೈಲು, ವಿಮಾನ ಸೇವೆ ಇರಲಿದೆ. ಅಂತರ್ ಜಿಲ್ಲಾ ಓಡಾಟ, ಖಾಸಗಿ ವಾಹನ ಸಂಚಾರ, ಸಾರಿಗೆ ಬಸ್ ಸಂಚಾರ, ಬಿಎಂಟಿಸಿ ಬಸ್, ಮೆಟ್ರೋ, ಆಟೋ, ಟ್ಯಾಕ್ಸಿ, ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ ಹಾಗೂ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಇರಲಿದೆ. ಅಗತ್ಯ ವಸ್ತು ಖರೀದಿಗೆ ಜನ ನಡೆದುಕೊಂಡು ಹೋಗಬೇಕು. ಸಮೀಪದ ಅಂಗಡಿಗಳಲ್ಲಿ ದಿನ ಬಳಕೆ ವಸ್ತು ಖರೀದಿಸಬೇಕು. ಒಂದು ವೇಳೆ ವಾಹನಗಳನ್ನು ರಸ್ತೆಗೆ ಇಳಿಸಿದರೆ, ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.