ವಿಜಯಸಾಕ್ಷಿ ಸುದ್ದಿ, ಅಹ್ಮದಾಬಾದ್
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏ. 30ರಂದು ನಡೆದಿದ್ದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ತಂಡ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಭರ್ಜರಿಯಾಗಿ ಜಯ ಗಳಿಸಿದೆ.
ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ಬೆಂಗಳೂರು ತಂಡವನ್ನು ಸತತ ಸೋಲನ್ನು ಕಂಡಿದ್ದ ಪಂಜಾಬ್ ಬರೋಬ್ಬರಿ 34 ರನ್ ಗಳ ಅಂತರದಿಂದ ಭರ್ಜರಿಯಾಗಿ ಜಯಗಳಿಸಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಪಂಜಾಬ್ ನ ಸ್ಪಿನ್ನರ್ ಹರ್ಪ್ರೀತ್ ಬ್ರಾರ್.
ಈ ಆವೃತ್ತಿಯ ಪ್ರಥಮ ಪಂದ್ಯವಾಡಿರುವ ಬ್ರಾರ್, ಆರ್ ಸಿಬಿಯ ಪ್ರಮುಖ ವಿಕೆಟ್ ಗಳನ್ನು ಕೆಡವಿ ಪಂಜಾಬ್ ಪಾಲಿಗೆ ಭರ್ಜರಿ ಜಯ ಧಕ್ಕಿಸಿ ಕೊಟ್ಟರು. ಬ್ರಾರ್, ವಿರಾಟ್ ಕೊಹ್ಲಿ (35 ರನ್), ಗ್ಲೆನ್ ಮ್ಯಾಕ್ಸವೆಲ್ (0), ಎಬಿ ಡಿ ವಿಲಿಯರ್ಸ್ (3) ಸೇರಿದಂತೆ ಪ್ರಮುಖ ಮೂರು ವಿಕೆಟ್ ಗಳನ್ನು ಕಿತ್ತರು. ಅಲ್ಲದೇ, ಬ್ಯಾಟಿಂಗ್ ನಲ್ಲಿ ಕೂಡ ಅಜೇಯ 25ರನ್ (17 ಎಸೆತ) ಅಮೋಘ ಪ್ರದರ್ಶನ ನೀಡಿ ತಂಡದ ಮೊತ್ತ ಹಿಗ್ಗುವಂತೆ ಮಾಡಿದ್ದರು.
ಅವರ ವಿರೋಚಿತ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹರ್ಪ್ರೀತ್ ಬ್ರಾರ್ ಪ್ರದರ್ಶನಕ್ಕೆ ಖುಷಿಯಾಗಿದೆ. ಗುಣಮಟ್ಟದ ಬ್ಯಾಟ್ಸಮನ್ ಗಳ ವಿಕೆಟ್ ಪಡೆಯುವುದು ಮತ್ತು ಪಂದ್ಯದ ಕೊನೆಯಲ್ಲಿ ಅಗತ್ಯ ರನ್ ಕೊಡುಗೆ ನೀಡಿದ್ದು ಖುಷಿಯಾಗಿದೆ ಎಂದು ಯುವಿ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ, ರಾಜ್ಯ ಕ್ರಿಕೆಟ್ ನ ವಿಚಾರಕ್ಕೆ ಬಂದರೆ ನಿನ್ನ ಮೇಲಿನ ಟೀಕೆಗಳಿಗೆ ಉತ್ತರಿಸಲು ಉತ್ತಮ ವಿಧಾನವಿದು. ಮ್ಯಾಚ್ ವಿನ್ನರ್ ಆಟಗಾರನ ನೀಡಿ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್, ಹರ್ಭಜನ್ ಸಿಂಗ್ ಒಳ್ಳೆಯ ಕೆಲಸ ಮಾಡಿದಿರಿ ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.