ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್ ಬಾಹ್ಯ ಬೆಂಬಲ?

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ನಗರಸಭೆಯ ಚುನಾವಣೆಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಅವಳಿ ನಗರದ ವಾರ್ಡ್‌ವೊಂದರಲ್ಲಿ ಕಾಂಗ್ರೆಸ್ ಪಕ್ಷ ಪಕ್ಷೇತರ ಅಭ್ಯರ್ಥಿಗೆ ಬಾಹ್ಯ ಬೆಂಬಲ ಘೋಷಿಸಿದೆ ಎಂಬ ಊಹಾಪೋಹಗಳು ಶುಕ್ರವಾರ ಬೆಳಗ್ಗೆಯಿಂದ ಗದಗ-ಬೆಟಗೇರಿ ನಗರದಾದದ್ಯಂತ ಕೇಳಿ ಬರುತ್ತಿವೆ.

ಹಿಂದುಳಿದ ‘ಎ ವರ್ಗಕ್ಕೆ ಮೀಸಲಾಗಿದ್ದ ವಾರ್ಡ್ ನಂ.28ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದಂತಹ ವಾತಾವರಣ ಇರಲಿಲ್ಲ. ಈ ಕಾರಣಕ್ಕಾಗಿಯೇ ಅಭ್ಯರ್ಥಿ ಘೋಷಿಸುವಲ್ಲಿ ತಡವಾಗಿತ್ತು. ಬಿಜೆಪಿಯ ಭದ್ರಕೋಟೆಯಾಗಿರುವ ಈ ವಾರ್ಡ್‌ನಲ್ಲಿ ಬಿಜೆಪಿಯ ಕಾರ್ಯಕರ್ತ ಬದ್ರಿ ಅಲಿಯಾಸ್ ವೀರಭದ್ರಪ್ಪ ಡಂಬಳ ಅವರ ಪತ್ನಿ ಮಹಾಲಕ್ಷ್ಮೀಗೆ ಟಿಕೆಟ್ ಕೇಳಿದ್ದ. ಆದರೆ, ಮಹಾಲಕ್ಷ್ಮೀಗೆ ಟಿಕೆಟ್ ಸಿಕ್ಕಿರಲಿಲ್ಲ. ಮಾಜಿ ಸದಸ್ಯ ಅನಿಲ್ ಅಬ್ಬಿಗೇರಿಗೆ ಟಿಕಟ್ ನೀಡಿತ್ತು. ಇದರಿಂದಾಗಿ ಆಕ್ರೋಶಗೊಂಡ ಬದ್ರಿ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾನೆ. ಇದರಿಂದ ಪಕ್ಷದ ಮುಖಂಡರಿಗೆ ಇರುಸು ಮುರುಸಾಗಿ ನಾಮಪತ್ರ ವಾಪಸ್ ಪಡೆಯುಲು ಸಾಕಷ್ಟು ಒತ್ತಡ ಹಾಕಿದ್ದರೂ, ಹಿಂಪಡೆಯದೇ ಅಂತಿಮವಾಗಿ ಕಣದಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದಾನೆ.

ಆದರೆ, ಆರಂಭದಲ್ಲಿ ಅಷ್ಟೇನೂ ಪ್ರಭಾವಿಯಾಗಿ ಕಾಣಿಸಿಕೊಳ್ಳದ ಪಕ್ಷೇತರ ಅಭ್ಯರ್ಥಿ ಮಹಾಲಕ್ಷ್ಮೀ ಇದೀಗ ಮತದಾರರನ್ನು ಸೆಳೆಯುವಲ್ಲಿ ಮುಂದಾಗಿದ್ದು, ಇವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರು ಬೆಂಬಲಿಸಿ ಕೈ ಸುಟ್ಟುಕೊಳ್ಳುವಂತಾಗಿದೆ.

ಕಾಂಗ್ರೆಸ್‌ನವರು ಹಣ ಕೊಟ್ಟರೇ?

ಶುಕ್ರವಾರ ಮುಂಜಾನೆಯಿಂದಲೂ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯ ಪತಿ ಹಣ ಪಡೆದಿದ್ದೇ ಸುದ್ದಿ. ಇಂತಹ ಒಂದು ಸುದ್ದಿ ಮೊದಲು ಎಲ್ಲಿ ಉದಯಿಸಿತೋ ಗೊತ್ತಿಲ್ಲ. ಆದರೆ, ವಾರ್ಡ್ ಸೇರಿ ಇಡೀ ಅವಳಿ ನಗರದೆಲ್ಲೆಡೆ 28ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್‌ನವರು ಹಣ ಕೊಟ್ಟಿದ್ದಾರೆ ಮತ್ತು ಬಾಹ್ಯ ಬೆಂಬಲ ನೀಡಿದ್ದಾರೆ ಎನ್ನುವ ವದಂತಿ ಹಬ್ಬಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಹಾಲಕ್ಷ್ಮೀ ವೀರಭದ್ರಪ್ಪ ಡಂಬಳ ಅವರು, ‘ಇದು ಕೇವಲ ಗಾಳಿ ಸುದ್ದಿ, ಯಾರು ಭೇಟಿಯೂ ಆಗಿಲ್ಲ. ಯಾರು ಬೆಂಬಲವನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

‘ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ನಾವು ಯಾವುದೇ ಬೆಂಬಲ ಕೊಟ್ಟಿಲ್ಲ. ಯಾರಿಗೂ ಬಾಹ್ಯ ಬೆಂಬಲ ನೀಡಿಲ್ಲ. ಈ ಆರೋಪವೆಲ್ಲ ಸತ್ಯಕ್ಕೆ ದೂರವಾಗಿದ್ದು, ಎರಡೂ ಪಕ್ಷಗಳ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವೆಂಕನಗೌಡ ಆರ್. ಗೋವಿಂದಗೌಡ್ರ ಆರೋಪ ತಳ್ಳಿ ಹಾಕಿದರು.


Spread the love

LEAVE A REPLY

Please enter your comment!
Please enter your name here