ವಿಜಯಸಾಕ್ಷಿ ಸುದ್ದಿ, ಕೊಲ್ಕತ್ತಾ
ಪಂಚ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಪೈಕಿ ಪಶ್ಚಿಮ ಬಂಗಾಳ ದೇಶದ ಜನರನ್ನು ತನ್ನತ್ತ ಸೆಳೆದಿದೆ. ಇಲ್ಲಿ ಬಿಜೆಪಿ ಹಾಗೂ ಟಿಎಂಸಿ ನಡುವೆ ಯುದ್ಧದ ರೀತಿಯಲ್ಲಿಯೇ ಚುನಾವಣೆ ನಡೆದಿತ್ತು. ಈ ಯುದ್ಧದಲ್ಲಿ ಟಿಎಂಸಿ ಗೆಲುವಿನ ನಗೆ ಬೀರುವ ಸಾಧ್ಯತೆ ದಟ್ಟವಾಗಿದೆ.
ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಇಳಿಸಿಯೇ ಸಿದ್ಧವೆಂದು ಬಿಜೆಪಿ ಪಟಾಲಂ ಅಮಿತ್ ಶಾ, ಮೋದಿ, ಜೆಪಿ ನಡ್ಡಾ ಮೂವರು ತಿಂಗಳುಗಳ ಕಾಲ ಅಖಾಡದಲ್ಲಿಯೇ ಬೀಡು ಬಿಟ್ಟಿದ್ದರು. ಆದರೆ, ಇಲ್ಲಿಯವರೆಗಿನ ಫಲಿತಾಂಶ ಗಮನಿಸಿದರೆ ಬಿಜೆಪಿಯ ಲೆಕ್ಕಾಚಾರ ತಲೆಕೆಳಾಗಾಗುತ್ತಿವೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ನೇತೃತ್ವದ ಟಿಎಂಸಿ ಪಕ್ಷವು ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ದಾಟಿ ಭಾರಿ ಮುನ್ನಡೆ ಸಾಧಿಸಿದೆ. ಸದ್ಯ ಟಿಎಂಸಿ 203ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಬಿಜೆಪಿ 86 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿರುವ ನಂದಿಗ್ರಾಮದಲ್ಲಿ ಸದ್ಯ ಟಿಎಂಸಿ ಮುನ್ನಡೆ ಸಾಧಿಸಿದೆ. ಸತತ ಹಿನ್ನಡೆ ಅನುಭವಿಸುತ್ತಿದ್ದ ಮಮತಾ ಸೋಲಬಹುದು ಎಂದೇ ಎಲ್ಲರೂ ಅಂದಾಜಿಸಿದ್ದರು. ಆದರೆ, ಸದ್ಯ ಮಮತಾ ಬ್ಯಾನರ್ಜಿ 1,500 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.