ವಿಜಯಸಾಕ್ಷಿ ಸುದ್ದಿ, ಗದಗ
ಪಡಿತರ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮನೆಯ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ವಿಠ್ಠಲ ರಾವ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ನಗರದ ಟ್ಯಾಗೋರ್ ರಸ್ತೆಯಲ್ಲಿ ನಡೆದಿದೆ.
ನಗರದ ಬಸವರಾಜ ವಾಲಿ ಎಂಬುವವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಇವರು ಮಹಾಂತೇಶ ಎಂಬ ವ್ಯಕ್ತಿಗೆ ಕೆಲವು ದಿನಗಳಿಂದ ಮನೆ ಬಾಡಿಗೆಗೆ ಕೊಟ್ಟಿದ್ದಾರೆ. ದವಸ ಧಾನ್ಯಗಳನ್ನು ತುಂಬಿಸುತ್ತೇನೆಂದು ಬಸವರಾಜ್ ಅವರ ಮನೆ ಬಾಡಿಗೆ ಪಡೆದು ಅಕ್ರಮ ಅಕ್ಕಿ ದಂಧೆಗೆ ಇಳಿದಿದ್ದಾನೆ.
ಅಕ್ರಮ ಅಕ್ಕಿ ದಂಧೆ ನಡೆಸುತ್ತಿದ್ದಾನೆ ಎನ್ನಲಾಗುತ್ತಿರುವ ಮಹಾಂತೇಶ ಮನೆಯಲ್ಲಿ ಸುಮಾರು 50 ಕೆಜಿಯ ಒಟ್ಟು 94 ಪಡಿತರ ಅಕ್ಕಿಯ ಮೂಟೆಗಳು ಸಿಕ್ಕಿವೆ. ಅಲ್ಲದೇ, ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸುವ ಗೋಧಿ, ತೊಗರಿ ಬೆಳೆ ಸಹ ದೊರೆತಿದ್ದು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಗ್ರಹಿಸಿಟ್ಟಿರುವ ಇವುಗಳು ಅಂಗನವಾಡಿ ಕೇಂದ್ರಗಳ ಅಕ್ಕಿ ನಾ? ಅಥವಾ ಪಡಿತರ ಚೀಟಿಯ ಅಕ್ಕಿ ನಾ? ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.
ಅಲ್ಲದೇ, ಕೆಎಂ ಬಾಂಬೆ ಗೋಲ್ಡ್ ಹೆಸರಿನ ಪಾಕೇಟ್ ಗಳನ್ನು ನಕಲಿ ಮಾಡಿ ಅವುಗಳಲ್ಲಿ ಅಕ್ಕಿ ತುಂಬಿ ಯಾರಿಗೂ ಅನುಮಾನ ಬಾರದಂತೆ ಮಾರಾಟ ಮಾಡಲು ಯತ್ನಿಸಿರುವ ಮಹಾಂತೇಶ ಪರಾರಿಯಾಗಿದ್ದು, ಆರೋಪಿಯ ಪತ್ತೆಗಾಗಿ ಪೋಲಿಸರು ಬಲೆ ಬಿಸಿದ್ದಾರೆ.