ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಚುನಾವಣಾ ಆಯೋಗದಿಂದ ಮತದಾನ ಮಾಡಲು ಅನುಕೂಲವಾಗುವಂತೆ ಬಿಎಲ್ಓ ಮೂಲಕ ಮತದಾರರ ಮನೆ ಮನೆಗೆ ವೋಟರ ಸ್ಲಿಪ್ ಹಂಚಿಕೆ ಮಾಡಬೇಕು ಎಂದು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಬಾಬರಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೋಬ್ಬ ಮತದಾರರ ಮನೆ ಮನೆಗೆ ಚುನಾವಣೆ ಆಯೋಗದಿಂದ ವೋಟರ್ ಸ್ಲಿಪ್ ಹಂಚಿಕೆ ಮಾಡಲಾಗಿತ್ತು. ಈಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಆಯೋಗ ಆಯಾ ಗ್ರಾಮದ ಬಿ ಎಲ್ ಓ ಮೂಲಕ ವೋಟರ್ ಸ್ಲಿಪ್ ಹಂಚುವದರಿಂದ ಅತಿ ಹೆಚ್ಚು ಮತದಾನ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದರಿಂದ, ಮತದಾರರು ಮತಗಟ್ಟೆಗೆ ಹೋಗು ಮುನ್ನ ತಮ್ಮ ಮನೆಯಲ್ಲಿರುವ ವೋಟರ್ ಸ್ಲಿಪ್ ತೆಗೆದುಕೊಂಡು ಹೋಗಲು ಸಹಕಾರಿಯಾಗುತ್ತದೆ. ಇಲ್ಲದಿದ್ದರೆ, ಸ್ಲಿಪ್ ಬರೆದು ಕೊಡುವವರೆಗೂ ಕಾಯಬೇಕಾಗಿದ್ದು, ಜನಜಂಗುಳಿ ಉಂಟಾಗುವುದರಿಂದ ಸ್ಲಿಪ್ ಬೇಗ ಸಿಗದಿರುವ ಕಾರಣಕ್ಕೆ ಮಹಿಳಾ ಮತದಾರರು ನಿರಾಶೆಗೊಂಡು ಮರಳಿ ಮನೆಗೆ ಹೋಗುವ ಸಾಧ್ಯತೆ ಇದೆ.

ಗ್ರಾಮ ಪಂಚಾಯಿತಿ ಚುನಾವಣೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದರಿಂದ ಅನೇಕ ಜನ ಕೂಲಿ ಕಾರ್ಮಿಕರು, ರೈತರೇ ಹೆಚ್ಚಿದ್ದಾರೆ. ಹಾಗಾಗಿ ಕಡ್ಡಾಯ ಮತದಾನ ಮಾಡಲು ಗ್ರಾ.ಪಂ.ನಿಂದ ಡಂಗುರ ಸಾರಬೇಕು. ಧ್ವನಿವರ್ಧಕಗಳ ಮೂಲಕ ತಪ್ಪದೇ ಮತದಾನ ಮಾಡುವಂತೆ ಪ್ರಚಾರ ಮಾಡಬೇಕು. ಅಲ್ಲದೇ, ಚುನಾವಣಾ ದಿನದಂದು ಸರ್ಕಾರಿ ನೌಕರರಿಗೆ ಸಾರ್ವತ್ರಿಕ ರಜಿ ಪೋಷಿಸಬೇಕು ಎಂದು ಗ್ರಾ.ಪಂ. ಉಪಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮನವಿ ಮಾಡಿದ್ದಾರೆ.

