ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಲಾಕ್ ಡೌನ್ ಇರುವುದರಿಂದಾಗಿ ಪೊಲೀಸರು ಓಡಾಡುತ್ತಿರುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಡಿಸಿಪಿಗೆ ಅವಾಜ್ ಹಾಕಿರುವ ಘಟನೆ ನಡೆದಿದೆ.
ಈ ಘಟನೆ ಇಲ್ಲಿಯ ಚನ್ನಮ್ಮ ವೃತ್ತದಲ್ಲಿ ನಡೆದಿದೆ. ಸೀಟ್ ಬೆಲ್ಟ್ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ರಾಮರಾಜನ್ ಅವರಿಗೆ ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ ಅವಾಜ್ ಹಾಕಿದ್ದಾರೆ.
ನಗರದ ಚೆನ್ನಮ್ಮ ವೃತ್ತದಲ್ಲಿ ತಮ್ಮ ಕಾರು ಚಾಲಕನೊಂದಿಗೆ ರಾಜಣ್ಣ ಕೊರವಿ ಆಗಮಿಸುತ್ತಿದ್ದರು. ಸೀಟ್ ಬೆಲ್ಟ್ ಹಾಕದಿರುವ ಹಿನ್ನೆಲೆಯಲ್ಲಿ ಡಿಸಿಪಿ ಸೀಟ್ ಬೆಲ್ಟ್ ಏಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ ಡಿಸಿಪಿ ಜೊತೆಗೆ ರಾಜಣ್ಣ ಕೊರವಿ ವಾಗ್ವಾದಕ್ಕಿಳಿದಿದ್ದಾರೆ.
ನಾನು ಮಾಜಿ ಕಾರ್ಪೊರೇಟರ್. ನಾನ್ಯಾರು ಅಂತಾ ಪರಿಚಯ ಮಾಡಿಕೊಳ್ಳಬೇಕಲ್ಲ ಎಂದು ಅವಾಜ್ ಹಾಕಿದ್ದಾರೆ. ಆಗ ಡಿಸಿಪಿ ನಮಗೆ ಯಾರಾದರೇನು? ಎಂದಿದ್ದಾರೆ. ಅಷ್ಟಕ್ಕೆ ರಾಜಣ್ಣ ಕೊರವಿ ಹಾಗೂ ಅವರ ಕಾರು ಚಾಲಕ ಡಿಸಿಪಿ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಕೊನೆಗೂ ಸೀಟ್ ಬೆಲ್ಟ್ ಹಾಕದ ರಾಜಣ್ಣ ಕೊರವಿಗೆ ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ.
ನಿಯಮಗಳನ್ನು ಉಲ್ಲಂಘಿಸಿದ ರಾಜಣ್ಣ ಕೊರವಿಗೆ ರೂ. 500 ರೂ ದಂಡ ಹಾಕಲಾಗಿದೆ. ರಾಜಣ್ಣ ಕೊರವಿ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ ರಾಮರಾಜನ್, ಇದು ಪೊಲೀಸರಿಗೆ ಕಾಮನ್. ಜನಸಾಮಾನ್ಯರು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ. ಆದರೆ, ನಾವು ಕಾನೂನು ಪ್ರಕಾರ ತಪ್ಪು ಮಾಡಿದವರಿಗೆ ದಂಡ ವಿಧಿಸುತ್ತೇವೆ. ರಾಜಕೀಯ ವ್ಯಕ್ತಿ, ಸಾಮಾನ್ಯ ವ್ಯಕ್ತಿ ಆದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳಿದ್ದಾರೆ.