- ಎಂಇಎಸ್, ಕಾಂಗ್ರೆಸ್ ಗೆ ಮುಖಭಂಗ
ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಇದೇ ಪ್ರಥಮ ಬಾರಿಗೆ ಪಕ್ಷಗಳ ಚಿಹ್ನೆಯಡಿ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿರುವ ಬಿಜೆಪಿ ಭರ್ಜರಿ ಜಯಗಳಿಸಿದ್ದು, ಸ್ಪಷ್ಟ ಬಹುಮತ ಪಡೆದುಕೊಂಡಿದೆ.
ಮಹಾನಗರ ಪಾಲಿಕೆ ರಚನೆ ಆದಾಗಿನಿಂದಲೂ ಕಿಂಗ್ ಆಗಿ ಮೆರೆದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ಮಕಾಡೆ ಮಲಗಿದ್ದು, ಕೇವಲ ನಾಲ್ಕು ಕ್ಷೇತ್ರಕ್ಕೆ ಸೀಮಿತಗೊಂಡಿದೆ. ಕಾಂಗ್ರೆಸ್ ಸಹ ಪ್ರಭಾವ ಬೀರುವಲ್ಲಿ ವಿಫಲವಾಗಿದ್ದು, ಕೇವಲ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಎಂಐಎಂ ಮೊದಲ ಬಾರಿಗೆ ಖಾತೆ ತೆರೆದಿದ್ದು, ಪಕ್ಷೇತರ ಸದಸ್ಯರೇ ನಿರ್ಣಾಯಕರಾಗಲಿದ್ದಾರೆ ಎಂಬ ಲೆಕ್ಕಾಚಾರ ಉಲ್ಟಾ ಆಗಿ ಕೇವಲ 10 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.
ಬಿಜೆಪಿಯ ದಿಗ್ವಿಜಯದ ಎದುರು ಎಂಇಎಸ್, ಕಾಂಗ್ರೆಸ್ , ಪಕ್ಷೇತರ ಅಭ್ಯರ್ಥಿಗಳು ತರೆಗಲೆಗಳಂತೆ ಉದುರಿ ಹೋಗಿದ್ದಾರೆ.
ಅಭಯ ಪಾಟೀಲ ಪ್ರತಿನಿಧಿಸುವ ದಕ್ಷಿಣ ಮತಕ್ಷೇತ್ರದ ವಾರ್ಡನಲ್ಲಿ ಬಿಜೆಪಿ ಅಲೆಗೆ ಯಾವುದೇ ಪಕ್ಷಗಳು ನಿಲ್ಲಲು ಸಾಧ್ಯವಾಗಿಲ್ಲ.
ಬಿಜೆಪಿ ಅಧಿಕಾರ ಉರುಳಿಸಲು ಎಂ+ಎಂ (ಮರಾಠಾ+ಮುಸ್ಲಿಂ) ಸೂತ್ರ ಎಂಇಎಸ್ ಗೆ ತಿರುಗುಬಾಣವಾಗಿರುವುದು ಬಿಜೆಪಿ ಗೆಲುವಿಗೆ ನೆರವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಬಿಜೆಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ತನ್ನೆಲ್ಲ ಶಕ್ತಿ ಪಣಕ್ಕಿಟ್ಟಿತ್ತು.
ಪಕ್ಷದ ರಾಜ್ಯಾಧ್ಯಕ್ಷರಿಂದ ಹಿಡಿದು, ಆರೇಳು ಸಚಿವರು, ಶಾಸಕರು, ಪದಾಧಿಕಾರಿಗಳು ವಾರ್ಡಗಳಿಗೆ ದಾಂಗುಡಿ ಇಟ್ಟು ಪ್ರಚಾರದಲ್ಲಿ ತೊಡಗಿಸಿಕೊಂಡರು. ನಗರದ ಇಬ್ಬರೂ ಶಾಸಕರು ಹಗಲಿರುಳು ಕೆಲಸ ಮಾಡಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದು, ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಒಟ್ಟಾರೆ ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿ ಬಿಜೆಪಿ ಮೊದಲ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ.
ಪಕ್ಷಗಳ ಬಲಾಬಲ
ಬಿಜೆಪಿ 36
ಕಾಂಗ್ರೆಸ್ 9
ಎಂಇಎಸ್ 4
ಎಂಐಎಂ 1
ಪಕ್ಷೇತರ 10