ವಿಜಯಸಾಕ್ಷಿ ಸುದ್ದಿ, ಅಮೃತಸರ್
ಕೃಷಿ ಕಾನೂನುಗಳ ವಾಪಸಾತಿಗೆ ಆಗ್ರಹಿಸಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿರುವ ರೈತ ಸಂಘಟನೆಗಳ ಪೈಕಿ ಒಂದಾಗಿರುವ ಲೋಕ್ ಭಲಾಯಿ ಇನ್ಸಾಫ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಬಲದೇವ್ ಸಿಂಗ್ ಸಿರ್ಸಾ ಅವರಿಗೆ ರಾಷ್ಟ್ರೀಯ ತನಿಖಾ ಏಜನ್ಸಿ ಸಮನ್ಸ್ ಜಾರಿಗೊಳಿಸಿದೆ.
ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ನಾಯಕ ಗುರ್ಪತ್ವಂತ್ ಸಿಂಗ್ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳನ್ವಯ ದಾಖಲಾಗಿರುವ ಪ್ರಕರಣ ಸಂಬಂಧ ಸಿರ್ಸಾಗೆ ಸಮನ್ಸ್ ಜಾರಿ ಮಾಡಿದೆ.
ಜ.17ರಂದು ಎನ್ಐಎಯ ಹೊಸದಿಲ್ಲಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ. ‘ಸರ್ಕಾರದ ವಿರುದ್ಧ ಬಂಡಾಯವೆಬ್ಬಿಸಲು ಜನರನ್ನು ಪ್ರಚೋದಿಸುತ್ತಿದ್ದಾರೆ. ಭಯ ಮತ್ತು ಅರಾಜಕತೆ ಸೃಷ್ಟಿಸಲು ಸಂಚು ಹೂಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ.
‘ರೈತರ ಪ್ರತಿಭಟನೆಯ ಹಳಿ ತಪ್ಪಿಸಲು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಬಲದೇವ್ ಸಿಂಗ್ ಸಿರ್ಸಾ ಆರೋಪಿಸಿದ್ದಾರೆ.
‘ಸರ್ಕಾರ ಮೊದಲು ಸರ್ವೋಚ್ಛ ನ್ಯಾಯಾಲಯದ ಮೂಲಕ ರೈತರ ಪ್ರತಿಭಟನೆ ಹಳಿ ತಪ್ಪಿಸಲು ಯತ್ನಿಸಿತ್ತು, ಇದೀಗ ಎನ್ಐಎ ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
‘ರೈತರ ಹೋರಾಟದ ಭಾಗವಾಗಿರುವ ಹಲವು ಜನರ ವಿರುದ್ಧವೂ ಸಮನ್ಸ್ ಜಾರಿ ಮಾಡಿದೆ. ಇದು ರೈತರನ್ನು ಹೆದರಿಸುವ ಯತ್ನ. ಆದರೆ, ಇದು ನಮ್ಮನ್ನು ಬಾಧಿಸದು, ನಾವು ಜಗ್ಗುವುದಿಲ್ಲ. ಆದರೆ ಜ.26ರ ಕಿಸಾನ್ ಪೆರೇಡ್ಗೆ ಅಡ್ಡಿಯುಂಟು ಮಾಡಲು ಎನ್ಐಎ ಹಗಲು ರಾತ್ರಿ ಶ್ರಮಿಸುತ್ತಿದೆ. ಪ್ರತಿಭಟನೆಗೆ ಕೆಟ್ಟ ಹೆಸರು ತರಲು ಸರ್ಕಾರವೂ ಕಂಕಣ ಬದ್ಧವಾಗಿದೆ ಎಂದು ಬಲದೇವ್ ಸಿಂಗ್ ಸಿರ್ಸಾ ದೂರಿದರು.