ವಿಜಯಸಾಕ್ಷಿ ಸುದ್ದಿ, ಗದಗ
ಇಲ್ಲಿನ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಕಿಲ್ಲಾ ಓಣಿಯ ನಿವಾಸಿ
ರಾಜನಸಾ ರಾಮನಾಥಸಾ ಮಿಸ್ಕಿನ್ ಎಂಬ 63 ವರ್ಷದ ವ್ಯಕ್ತಿಯನ್ನು ಆರು ತಿಂಗಳವರೆಗೆ ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಆದೇಶಿಸಿದ್ದಾರೆ.
ರಾಜನಸಾ ಮಿಸ್ಕಿನ್ ಈತನು ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೃತ್ಯಗಳಾದ ಮಟಕಾ ಜೂಜಾಟ ಆಡುವ ಮತ್ತು ಆಡಿಸುವ ಪ್ರವೃತ್ತಿಯಲ್ಲಿ ತೊಡಗಿಕೊಂಡಿದ್ದ. ಅಲ್ಲದೇ, ಇದೇ ಪ್ರವೃತ್ತಿಯನ್ನು ಮುಂದುವರೆಸುಕೊಂಡು ಹೋಗುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಹಾಗೂ ಸಮಾಜಘಾತುಕ ಕಾರ್ಯ ನಿಯಂತ್ರಿಸುವ ಸಲುವಾಗಿ ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಗದಗ ಉಪವಿಭಾಗದ ಸರಹದ್ದಿನಿಂದ ಮಾ.23 ರಿಂದ ಸೆಪ್ಟಂಬರ್ 22ರವರೆಗೆ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿದ್ದಾರೆ. ತಕ್ಷಣದಿಂದಲೇ ಯಾದಗಿರಿ ಜಿಲ್ಲೆಗೆ ಸ್ಥಳಾಂತರಿಸುವಂತೆ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ನಿರ್ದೇಶಿಸಿದ್ದಾರೆ.
ಅಲ್ಲದೇ, ಸದರಿ ಆದೇಶವನ್ನು ಉಲ್ಲಂಘಿಸಿದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 61ರ ಪ್ರಕಾರ ಆರೋಪಿತನನ್ನು ಬಂಧಿಸಿ, ಪೊಲೀಸ್ ಸುಪರ್ದಿಯಲ್ಲಿ ಪಡೆದು ನಿಗದಿಪಡಿಸಿದ ಜಿಲ್ಲೆಗೆ ಸ್ಥಳಾಂತರಿಸುವಂತೆ ಎಸಿ ರಾಯಪ್ಪ ಹುಣಸಗಿ ಸೂಚನೆ ನೀಡಿದ್ದಾರೆ.
ಇದರಿಂದ ಪ್ರಸ್ತುತ ವರ್ಷದಲ್ಲಿ ಅಪರಾಧಿಕ ಪ್ರವೃತ್ರಿಯುಳ್ಳ ಇಂತಹ ಒಟ್ಟು ನಾಲ್ವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿದಂತಾಗಿದೆ ಎಂದು ಜಿಲ್ಲಾ ಪೊಲೀಸ್ ಕಾರ್ಯಾಲಯ ತಿಳಿಸಿದೆ.