ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಎರಡು ದಿನಗಳಿಂದ ನಡೆದ ಮಾತೃಶ್ರೀ (ಅವ್ವ) ಕಪ್ ಮದರ್ ಥೇರೆಸಾ ತಂಡದ ಮಡಿಲು ಸೇರಿತು. ರವಿವಾರ ಮದರ್ ಥೇರೆಸಾ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಮದರ್ ಥೇರೆಸಾ ತಂಡದ ಆಟಗಾರರ ಸಾಂಘಿಕ ಯತ್ನಕ್ಕೆ ಜಯ ಒಲಿದು ಬಂತು.
ಶನಿವಾರ ಆರಂಭಗೊಂಡ ಮೊದಲ ಪಂದ್ಯದಲ್ಲಿ ಡೀಸಿ ವಿಕಾಸ್ ಕಿಶೋರ್ ಸುರಳ್ಕರ್ ನೇತೃತ್ವದ ಜೀಜಾಮಾತಾ ತಂಡ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು.
ಭಾನುವಾರ ಶ್ರೀನಿವಾಸ ಗೋಂಧಳಿ ನಾಯಕತ್ವದ ದಾನ ಚಿಂತಾಮಣಿ ಅತ್ತಿಮಬ್ವೆ ತಂಡದ ಜೊತೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೀಸಿ ಟೀಮ್ ನಿಗದಿತ 10 ಓವರ್ಗಳಲ್ಲಿ 86 ರನ್ಗಳನ್ನು ಕಲೆ ಹಾಕುವಲ್ಲಿ ಶಕ್ತವಾಯಿತು. 87 ರನ್ಗಳ ಮೊತ್ತ ಬೆನ್ನು ಹತ್ತಿದ ಅತ್ತಿಮಬ್ಬೆ ತಂಡ 8.5 ಓವರ್ಗಳಲ್ಲಿ ಗುರಿ ಸಾಧಿಸಿ ಫೈನಲ್ ಪ್ರವೇಶಿಸಿತು. ಅದೃಷ್ಟದ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದ ಡೀಸಿ ಟೀಮ್, ಈ ಪಂದ್ಯದ ಸೋಲಿನೊಂದಿಗೆ ಟೂರ್ನಿಯಿಂದ ಹೊರ ಬಿತ್ತು.
ಕ್ವಾರ್ಟರ್ ಫೈನಲ್ನಲ್ಲಿ ಜಿಪಂ ತಂಡದೊಂದಿಗೆ ಮುಖಾಮುಖಿಯಾಗಿದ್ದ ಮದರ್ ಥೇರೆಸಾ ತಂಡ ಟಾಸ್ನಲ್ಲಿ ಸೋತು ಫಿಲ್ಡಿಂಗ್ಗೆ ಇಳಿದಿತ್ತು. ನಿಗದಿತ 10 ಓವರ್ಗಳಲ್ಲಿ ಜಿಪಂ ತಂಡ 94 ರನ್ಗಳನ್ನು ಕಲೆ ಹಾಕಿತು. 95 ರನ್ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ಮದರ್ ಥೇರೆಸಾ ತಂಡ 8.4 ಓವರ್ಗಳಲ್ಲಿ ಗುರಿ ಸಾಧಿಸಿತು. ಈ ಗೆಲುವಿನೊಂದಿಗೆ ಮದರ್ ಥೇರೆಸಾ ತಂಡ, ಅದೃಷ್ಟದ ಮೂಲಕ ಫೈನಲ್ ಪ್ರವೇಶಿಸಿತು.
12 ಓವರ್ಗಳ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಮುಖಾಮುಖಿಯಾದ ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಲಬ್ನ ಅತ್ತಿಮಬ್ಬೆ ಹಾಗೂ ಥೇರೆಸಾ ತಂಡಗಳು ನೋಡಗರಿಗೆ ರೋಮಾಂಚನದ ರಸದೌತಣ ನೀಡಿದವು. ಫೈನಲ್ ಪಂದ್ಯದ ಟಾಸ್ ಗೆದ್ದ ಅತ್ತಿಮಬ್ಬೆ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಥೇರೆಸಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ಓಪನರ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ಸೂರಿ (ಗುಂಡಾ) ಇನ್ನಿಂಗ್ಸ್ನ ಕೊನೆಯ ಬೌಲ್ತನಕ ಸ್ಕ್ರೀಜ್ಗೆ ನೆಲಕಚ್ಚಿ ನಿಂತು ಆಕರ್ಷಕ ಅರ್ಧಶತಕ ಪೂರೈಸಿ ಅಜೇಯರಾಗಿ ಉಳಿದು 79 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಿಗದಿತ 12 ಓವರ್ಗಳಲ್ಲಿ 155 ರನ್ಗಳನ್ನು ಪೇರಿಸಿದ ಥೇರೆಸಾ ತಂಡ ಅತ್ತಿಮಬ್ಬೆ ತಂಡಕ್ಕೆ 156 ರನ್ ಗಳಿಸುವ ಸವಾಲು ಎಸೆಯಿತು.
156 ರನ್ಗಳ ಬೃಹತ್ ಮೊತ್ತದ ಬೆನ್ನು ಬಿದ್ದ ಅತ್ತಿಮಬ್ಬೆ ತಂಡ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಬ್ಯಾಟ್ಸ್ಮನ್ ಉಮಾಕಾಂತ ಬಿರುಸಿನ 48 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. 4ನೇ ಓವರ್ವೊಂದರಲ್ಲೇ 32 ರನ್ ಗಳಿಸಿದ ಅತ್ತಿಮಬ್ಬೆ ತಂಡದತ್ತ ಗೆಲುವು ಒಲಿಯಿತು ಎಂದುಕೊಳ್ಳುವಷ್ಟರಲ್ಲಿ ಥೇರೆಸಾ ತಂಡದ ಬೌಲರ್ಗಳ ದಾಳಿಗೆ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಸೇರಿದರು. ನಿಗದಿತ 12 ಓವರ್ಗಳಲ್ಲಿ ಅತ್ತಿಮಬ್ಬೆ ತಂಡ 108 ರನ್ಗಳನ್ನು ಮಾತ್ರ ಕಲೆ ಹಾಕುವಲ್ಲಿ ಶಕ್ತವಾಗಿ ಫೈನಲ್ ಪಂದ್ಯ ಕೈಚೆಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿತು.
ಶಿವು, ಕಿರಣ್ ಬರ್ತಡೆ ಬಾಯ್ಸ್..
ಎರಡು ದಿನಗಳ ಕಾಲ ನಡೆದ ಅದ್ಭುತ ಟೂರ್ನಮೆಂಟ್ನಲ್ಲಿ ಸಂಭ್ರಮ, ಸಂತಸಕ್ಕೆ ಪಾರವೇ ಇರಲಿಲ್ಲ. ಕ್ಲಬ್ನ ಆಟಗಾರರಾದ ಒನಕೆ ಓಬವ್ವ ತಂಡದ ಶಿವಕುಮಾರ್ ನಾಲ್ವಾಡ್ ಹಾಗೂ ಝಾನ್ಸಿರಾಣಿ ಲಕ್ಷ್ಮೀಬಾಯಿ ತಂಡದ ಕಿರಣ್ ಅವರ ಜನ್ಮದಿನವನ್ನು ಟೂರ್ನಮೆಂಟ್ನಲ್ಲಿ ಆಚರಿಸಿದ್ದು ಅವಿಸ್ಮರಣೀಯ ಸಂಗತಿಗಳಲ್ಲಿ ಒಂದಾಗಿ ದಾಖಲಾಯಿತು.
ಸಮಾರೋಪದಲ್ಲಿ ಭಾವುಕರಾದ ಆಟಗಾರರು
ಟೂರ್ನಮೆಂಟ್ನ ಫೈನಲ್ ಪಂದ್ಯದಲ್ಲಿ ಅವ್ವ ಟ್ರೋಫಿ ಗೆದ್ದ ಮದರ್ ಥೇರೆಸಾ ತಂಡ ಹಾಗೂ ರನ್ನರ್ ಅಪ್ ಸ್ಥಾನ ಗಳಿಸಿದ ಅತ್ತಿಮಬ್ಬೆ ತಂಡಕ್ಕೆ ಟ್ರೋಫಿ ನೀಡಲು ಆಟಗಾರರ ಅವ್ವಂದಿರೇ ಸಾಕ್ಷಿಯಾದದ್ದು ಎಲ್ಲ ಆಟಗಾರರು ಕೆಲ ಕ್ಷಣ ಭಾವುಕರಾದರು.
ಮುಖಂಡ ಗಿರೀಶ್ ಮುಂದಡಾ ಅವರ ಮಾತೃಶ್ರೀ ಶೋಭಾ ಮುಂದಡಾ ಮಾತನಾಡಿ, ತಾಯಿ-ಮಕ್ಕಳ ಬಾಂಧವ್ಯ, ಮಕ್ಕಳ ಬಗ್ಗೆ ತಾಯಿಗಿರುವ ಮಮತೆ, ಕಾಳಜಿ ಕುರಿತು ತಿಳಿಸಿದ ಅವರು, ಮಕ್ಕಳಿಂದ ತಾಯಿ ಬಯಸೋದು ಒಂದೆರಡು ಹಿತನುಡಿಗಳನ್ನೇ ಹೊರತು ಹಣ, ಬಂಗಾರವನ್ನಲ್ಲ. ಯಾಕೆಂದರೆ ತಾಯಿಗೆ ತನ್ನ ಮಕ್ಕಳೇ ಬಂಗಾರ. ಇಲ್ಲಿರುವ ಎಲ್ಲರೂ ಬಂಗಾರವೇ ಎಂದಾಗ ಆಟಗಾರರ ಕಣ್ಣಂಚಲಿ ನೀರು ಜಿನುಗಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬಸವರಾಜ ಕರುಗಲ್ ಅವರ ಮಾತೃಶ್ರೀ ಗಿರಿಜಮ್ಮ ಕರುಗಲ್ ಹಾಎ ಮುಂಜುನಾಥ ಅಜ್ಜನವರ ಮಾತೃಶ್ರೀ ರತ್ನಮ್ಮ ವಿಜೇತ ಆಟಗಾರರಿಗೆ ಪದಕ ಹಾಗೂ ಟ್ರೋಫಿ ವಿತರಿಸಿದರು. ಪೂನಂ ಮುಂದಡಾ ಹಾಗೂ ಶೋಭಾ ಮುಂದಡಾ ವಿಜೇತರಿಗೆ ಕಪ್ ಹಾಗೂ ರನ್ನರ್ ಅಪ್ ಪಾರಿತೋಷಕ ನೀಡಲು ಸಹಕರಿಸಿದರು.
ಟ್ರೋಫಿ ಎತ್ತಿ ಹಿಡಿಯುವ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದ ಮದರ್ ಥೇರೆಸಾ ತಂಡ, ಅಂತಿಮವಾಗಿ ಕಪ್ ಗೆದ್ದಾಗ ತಂಡದ ಆಟಗಾರರ ಸಂಭ್ರಮಕ್ಕೆ ಪಾರವಢ ಇರಲಿಲ್ಲ. ತಂಡದ ಆಟಗಾರ ಈರಣ್ಣ ಸಂಭ್ರಮಿಸಿದ ಪರಿ ನೆರೆದಿದ್ದ ಎಲ್ಲ ಆಟಗಾರರನ್ನು ರಂಜಿಸಿತು.