ವಿಜಯಸಾಕ್ಷಿ ಸುದ್ದಿ, ಬೆಳಗಾವಿ
- ಕೃಷ್ಣಾ, ವೇದಗಂಗಾ, ದೂದಗಂಗಾ ನದಿಯ ಒಳಹರಿವು ಹೆಚ್ಚಳ
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.
ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಲ್ಲಿ ಒಳಹರಿವು ಹೆಚ್ಚಳಗೊಂಡಿದ್ದು, ಗುರುವಾರ ಒಂದೇ ದಿನ 8 ಅಡಿಯಷ್ಟು ನೀರು ಏರಿಕೆಯಾಗಿದ್ದು, ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಬುಧವಾರ ಕೃಷ್ಣಾ ನದಿಯ ಒಳಹರಿವು 63 ಸಾವಿರ ಕ್ಯೂಸೆಕ್ ಇದ್ದದ್ದು, ಗುರುವಾರ 77 ಸಾವಿರ ಕ್ಯೂಸೆಕ್‍ಗೆ ಏರಿಕೆಯಾಗಿದೆ.
ನದಿಯಂತಾದ ಹೆದ್ದಾರಿ
ಬೆಳಗಾವಿ ಜಿಲ್ಲೆಯಾದ್ಯಂತ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ.
ಗುರುವಾರ ಬೆಳಗಾವಿಯ ಹೊರವಲಯ ವಂಟಮೂರಿ ಘಾಟ್ ಬಳಿ ರಾಷ್ಟ್ರೀಯ ಹೆದ್ದಾರಿ 4 ಜಲಾವೃತಗೊಂಡು ನದಿಯಂತೆ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನೀರಿನ ರಭಸಕ್ಕೆ ಕಾರೊಂದು ಜಾರಿಹೋದ ಪ್ರಸಂಗ ನಡೆದಿದೆ.
ಕುಸಿದ ಮನೆ
ಖಡೇ ಬಜಾರದಲ್ಲಿ ಹಳೆಯ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ. ಇನ್ನು ಮಹಾಂತೇಶ ನಗರದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ತೀವ್ರ ಪರದಾಡುವಂತಾಗಿದೆ. ಬಳ್ಳಾರಿ ನಾಲಾ ನೀರು ನುಗ್ಗಿ ಯಳ್ಳೂರು ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.
ಗ್ರಾಮಗಳ ಸಂಪರ್ಕ ಕಡಿತ
ಖಾನಾಪೂರ ತಾಲೂಕಿನ ಕಣಕುಂಬಿ, ಜಾಂಬೋಟ್ಟಿ, ಲೋಂಡಾ ಮತ್ತು ನೀಲಾವಡೆ ಬ್ರಿಜ್ ಹಾಗೂ ಹೆಬ್ಬಾನಟ್ಟಿ ಬ್ರಿಜ್ ಗಳ ಮೇಲೆ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಖಾನಾಪೂರ ತಾಲೂಕಿನಲ್ಲಿ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ನೀಲಾವಡೆ, ಅಂಬೋಲಿ, ಕಬನಾಳ್ಳಿ ಹೆಬ್ಬಾನಟ್ಟಿ ಗ್ರಾಮಗಳಿಗೂ ರಸ್ತೆ ಸಂಪರ್ಕ ಕಡಿತಗೊಂಡಿದೆ.