ವಿಜಯಸಾಕ್ಷಿ ಸುದ್ದಿ, ಕೋಲಾರ
ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣಕ್ಕೆ ಸಂಬಧಿಸಿದಂತೆ ಅಪಹರಿಸಿದ್ದ ಆರು ಜನ ಅಪಹರಣಕಾರರನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಗಳಿಂದ ಮಾರಕಾಸ್ತ್ರ, ಮೊಬೈಲ್ ಸೇರಿದಂತೆ ಸುಮಾರು 20 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಕವಿರಾಜ್(43), ಲಿಖಿತ್(20), ಉಲ್ಲಾಸ್(21), ಮನೋಜ್(20), ರಾಘವೇಂದ್ರ(34), ಪ್ರವೀಣ್(20) ಬಂಧಿತ ಆರೋಪಿಗಳಾಗಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದ ಐಜಿ ಸೀಮಂತ್ ಕುಮಾರ್ ಸಿಂಗ್ ಅವರು, ಆರೋಪಿಗಳ ಪತ್ತೆಗಾಗಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು ಅಲೆದಾಡಿದ್ದು, ಪ್ರಕರಣದ ಎ1 ಆರೋಪಿಯಾಗಿರುವ ಕವಿರಾಜ್ ಎಂಬುವವನನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅಲ್ಲಿಂದಲೇ ತಪ್ಪಿಸಿಕೊಂಡಿದ್ದು, ಅವನ ಪತ್ತೆಗೆ ಹುಡುಕಾಟ ನಡೆದಿದೆ. ಕವಿರಾಜ್ ವಿರುದ್ಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳಿವೆ. ತಮಿಳುನಾಡು ಮತ್ತು ಬೆಂಗಳೂರಿನಲ್ಲೂ ಕೇಸ್ಗಳಿವೆ ಎಂದು ಮಾಹಿತಿ ನೀಡಿದರು.
ನ.25 ರಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿದ್ದ ಆರೋಪಿಗಳು ನ.28 ರಂದು ಮೂರು ದಿನಗಳ ಬಳಿಕ ಹೊಸಕೋಟೆ ತಾಲೂಕಿನ ನಂದಗುಡಿಯ ಶಿವನಾಪುರ ಬಳಿ ಬಿಟ್ಟಿದ್ದರು. ಈ ಅವಧಿಯಲ್ಲಿ ಅಪಹರಣಕಾರರು ಒಟ್ಟು 48 ಲಕ್ಷ ತೆಗೆದುಕೊಂಡಿದ್ದರು. ಅದರಲ್ಲಿ ಸದ್ಯ 20,50,000 ರೂ. ಹಣ ಮರಳಿ ಪಡೆದಿದ್ದು, ಇನ್ನುಳಿದ ಹಣವನ್ನು ವಾಪಾಸ್ ಪಡೆಯಲಾಗುವುದು ಎಂದು ಐಜಿ ತಿಳಿಸಿದರು.
ಮಾಜಿ ಸಚಿವರ ಕಿಡ್ನ್ಯಾಪ್ ಪ್ರಕರಣದ ತನಿಖೆಯನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಾಯಿಲ್ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಕಾರ್ಯಾಚರಣೆಗೆ ಇಬ್ಬರು ಎಎಸ್ಪಿ, 3 ಸಿಪಿಐ, 3 ಪಿಎಸ್ಐ, 2 ಎಎಸ್ಐ, 4 ಹೆಚ್ಸಿ, 6 ಜನ ಪಿಸಿ ಅವರನ್ನು ಬಳಸಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.
ಈ ಕೃತ್ಯಕ್ಕೆ ಎರಡು ಮಾರುತಿ ಶಿಫ್ಟ್, ಒಂದು ಮಾರುತಿ ರಿಟ್ಜ್, ಇನೋವಾ, ಕೆಟಿಎಂ ಡ್ಯುಕ್, ಡ್ರಾಗರ್, ಕಬ್ಬಿಣದ ಲಾಂಗ್, ಬೇಸ್ ಬಾಲ್ ಬ್ಯಾಟ್, ಮಚ್ಚು, ಕಾರಿನ ನಂಬರ್ ಪ್ಲೇಟ್, ಮಂಕಿ ಟೋಪಿ ಬಳಸಿದ್ದರು ಎಂದು ತಿಳಿಸಿದ ಅವರು, ತನಿಖೆಯ ಸಿಬ್ಬಂದಿಗಳಿಗೆ 50 ಸಾವಿರ ನಗದು ಹಾಗೂ ಪ್ರಮಾಣಪತ್ರ ನೀಡುವ ಮೂಲಕ ಐಜಿ ಸೀಮಂತ್ ಕುಮಾರ್ ಸಿಂಗ್ ಅಭಿನಂದಿಸಿದರು.