ವಿಜಯಸಾಕ್ಷಿ ಸುದ್ದಿ, ಕಂಪ್ಲಿ
ಪಟ್ಟಣದಲ್ಲಿ ಮಾಸ್ಕ್ ಧರಿಸದೇ ವಾಹನಗಳನ್ನು ಚಲಾಯಿಸುವ, ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮತ್ತು ಮಾಸ್ಕ್ ಧರಿಸದ ಅಂಗಡಿಗಳ ಮಾಲೀಕರು ಸೇರಿದಂತೆ ಗ್ರಾಹಕರಿಗೆ ಸ್ಥಳೀಯ ಪಿಎಸ್ಐ ಮತ್ತು ಸಿಬ್ಬಂದಿ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕರ್ತವ್ಯ ನಿರತರಾಗಿದ್ದ ಪಿ.ಎಸ್.ಐ ಮೌನೇಶ್ ಉ ರಾಥೋಡ್ ಮತ್ತು ಸಿಬ್ಬಂದಿ ಮಾಸ್ಕ್ ಧರಿಸದೇ ವಾಹನ ಚಲಾಯಿಸುತ್ತಿದ್ದವರನ್ನು ತಡೆದು 100 ರೂ.ಗಳ ದಂಡ ವಿಧಿಸಿದರು. ಜೊತೆಗೆ ಮಾಸ್ಕ್ಗಳನ್ನು ಹಾಕಿಕೊಳ್ಳದೇ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕರಿಗೆ ಹಾಗೂ ವಸ್ತುಗಳನ್ನು ಖರೀದಿಸುತ್ತಿದ್ದ ಗ್ರಾಹಕರಿಗೂ ದಂಡವನ್ನು ವಿಧಿಸಿದರು. ವಿಶೇಷವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪಾದಾಚಾರಿಗಳಿಗೆ ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸುವಂತೆ ಮನವಿ ಮಾಡಿದರು.
ಪಿಎಸ್ಐ ಮೌನೇಶ್ ಉ ರಾಥೋಡ್ ಮಾತನಾಡಿ, ಮಹಾಮಾರಿ ಕೊರೊನಾ ವೈರಸ್ ಹಬ್ಬುತ್ತಿರುವ ವೇಗ ಕಡಿಮೆಯಾಗುತ್ತಿದೆಯಾದರೂ ವೈರಸ್ನ ಎರಡನೇ ಅಲೆ ವ್ಯಾಪಕವಾಗಿ ಹರಡಬಹುದಾದ ಸಾಧ್ಯತೆಗಳಿವೆ. ಅದರೂ ವಾಹನ ಸವಾರರು ಮತ್ತು ಸಾರ್ವಜನಿಕರು ಮಾಸ್ಕ್ ಧರಿಸದಿರುವುದು ಸರಿಯಲ್ಲ. ಪೊಲೀಸರಿಗೆ ಅಲ್ಲದಿದ್ದರೂ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯಕ್ಕಾಗಿ ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸುವಂತೆ ಮನವಿ ಮಾಡಿದರು.
ಇಂದು ಮಾಸ್ಕ್ ಧರಿಸದೇ ಇರುವ 150ಕ್ಕೂ ಅಧಿಕ ಜನರಿಂದ ತಲಾ 100 ರೂಗಳಂತೆ ದಂಡ ವಿಧಿಸಿ 15 ಸಾವಿರೂಗಳನ್ನು ಸಂಗ್ರಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಎಸ್ಐಗಳಾದ ಕೆ.ಎನ್.ಹಗರಪ್ಪ, ಪರಶುರಾಮಪ್ಪ, ತ್ಯಾಗರಾಜ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

