ಕೋವಿಡ್-19 ಕಾರ್ಯಪಡೆ ಸಭೆಯಲ್ಲಿ ನಿರ್ಧಾರ
ವಿಜಯಸಾಕ್ಷಿ ಸುದ್ದಿ, ನರಗುಂದ
ಕೋವಿಡ್ ಎರಡನೇ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚಿಕ್ಕ ನರಗುಂದ ಗ್ರಾಮ ಪಂಚಾಯತಿ ಮುಂದಾಗಿದ್ದು, ಗ್ರಾಮದಲ್ಲಿ ಮಾಸ್ಕ್ ಹಾಕದೇ ತಿರುಗುವವರಿಗೆ 100 ರೂ, ದಂಡ, ಹಾಗೂ ಅವಧಿ ಮೀರಿ ಅಂಗಡಿ ಮುಗ್ಗಟ್ಟು ತೆರದವರಿಗೆ 500 ರೂ, ಗಳ ದಂಡ ಹಾಕಲು ತಿರ್ಮಾನ ಕೈಗೊಳ್ಳಲಾಗಿದೆ.

ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಅಧ್ಯಕ್ಷ ಮುತ್ತು ರಾಯರಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಕಾರ್ಯಪಡೆಯ ಸಭೆಯಲ್ಲಿ ಈ ತೀರ್ಮಾನ ತಗೆದುಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮುತ್ತು ರಾಯರಡ್ಡಿ, ಗ್ರಾಮದ ಸರಕಾರಿ ಆಸ್ಪತ್ರೆ, ಆವರಣ ಸೇರಿದಂತೆ ಸಿಬ್ಬಂದಿಗಳು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೋಗಿಗಳಿಗೆ ಶುದ್ಧ ಕುಡಿಯುವ ನೀರು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಸಿಬ್ಬಂದಿಗಳು ಗ್ರಾಮದ ಪ್ರತಿ ವಾರ್ಡ್ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಗ್ರಾಮದಲ್ಲಿ ಜನಜಂಗುಳಿ ಸೇರದಂತೆ ಪೊಲೀಸರು ಆಗಾಗ ಗ್ರಾಮಕ್ಕೆ ಭೇಟಿ ಕೊಡಬೇಕು. ಕೊರೊನಾ ಸೋಂಕು ತಡೆಗಟ್ಟಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಅಧ್ಯಕ್ಷ ಮುತ್ತು ರಾಯರಡ್ಡಿ ಮನವಿ ಮಾಡಿದರು.

ಪಿಡಿಒ ಶೈನಾಜ್ ಮುಜಾವರ್ ಮಾತನಾಡಿ, ಸರ್ಕಾರದ ನಿಯಮಾವಳಿ ಪ್ರಕಾರ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಗ್ರಾಮದ ಪ್ರತಿ ವಾರ್ಡ್ ಗಳಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳೋಣ ಎಂದರು.
ಗ್ರಾಮ ಲೆಕ್ಕಾಧಿಕಾರಿ ದೊಡಮನಿ ಮಾತನಾಡಿ, ಕೋವಿಡ್ ಹರಡದಂತೆ ತಡೆಯಲು ಸರಕಾರದ ನಿಯಮಾವಳಿ ಪ್ರಕಾರ ಗ್ರಾಮದಲ್ಲಿ ಹೋಟೆಲ್, ಪಾನ್ ಶಾಪ್, ಬೀಡಾ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಿಸಬೇಕು ಎಂದರು.

ಆರೋಗ್ಯ ಸಹಾಯಕಿ ಶರಾವತಿ ಹಿರೇಮಠ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ, ಮಾಸ್ಕ್ ಹಾಗೂ ಇತರ ಸುರಕ್ಷಿತ ಮಾರ್ಗಗಳ ಕುರಿತು ಮನವರಿಕೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮಾತನಾಡಿ, ಸೋಂಕು ನಿಯಂತ್ರಣಕ್ಕೆ ಹೊರಜಿಲ್ಲೆ, ಹೊರ ರಾಜ್ಯದಿಂದ ಬರುವವರ ಬಗ್ಗೆ ಪ್ರತಿದಿನ ಮಾಹಿತಿ ಸಂಗ್ರಹಿಸಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ತಿಳಿಸಲಾಗಿದೆ. ಗರ್ಭಿಣಿ ಆರೈಕೆ, ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಲು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಿಳಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಹಳೆಮನಿ ಮಾತನಾಡಿ, ಕೊರೊನಾ ಸೋಂಕಿನ ಬಗ್ಗೆ ಈಗಾಗಲೇ ಹಲವು ಬಾರಿ ಮೈಕ್ ಮೂಲಕ ಒಂದು ವಾರಗಳ ಕಾಲ ಪ್ರಚಾರ ಮಾಡಲಾಗಿದೆ. ಆದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಅಧ್ಯಕ್ಷರು, ಪೊಲೀಸ್ ಇಲಾಖೆ ಮೂಲಕ ಮಾಸ್ಕ್ ಧರಿಸದೇ ತಿರುಗಾಡುವಂತಹ ಜನರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಸರ್ಕಾರದ ಆದೇಶದಂತೆ ಕೊರೊನಾ ಕಾರ್ಯಪಡೆ ರಚಿಸಲಾಯಿತು. ನಂತರ ಗ್ರಾಮದಲ್ಲಿ ಸೋಂಕಿನ ಕುರಿತು ಜಾಗೃತಿ ನಡೆಸಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ, ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ್ಣ ಕಂಬಳಿ, ಶರಣಪ್ಪ ಹಳೆಮನಿ, ಬಾಪು ಹಿರೇಗೌಡ್ರ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ಶ್ರುತಿ ಬ್ಯಾಳಿ, ಶಂಕ್ರವ್ವ ಚಲವಾದಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ್, ವಿವಿಧ ಇಲಾಖೆಗಳ ಸಿಬ್ಬಂದಿ, ಆಶಾ, ಅಂಗನವಾಡಿ, ಆರೋಗ್ಯ ಇಲಾಖೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.