ರಾಜ್ಯಕ್ಕೆ ಕರೆಂಟ್ ಶಾಕ್ ಸಾಧ್ಯತೆ

0
Spread the love

ವಿಜಯಸಾಕ್ಷಿ ಸುದ್ದಿ, ರಾಯಚೂರು

Advertisement

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ(raichur thermel power station) ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯಕ್ಕೆ ಶೇ.45ರಷ್ಟು ವಿದ್ಯುತ್ ಪೂರೈಕೆ ಮಾಡುವ ಆರ್‌ಟಿಪಿಎಸ್ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆ ಎದುರಾಗಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎಂಟು ಘಟಕಗಳಿಂದ ನಿತ್ಯ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದರೆ, ಕಲ್ಲಿದ್ದಲು ಕೊರತೆಯಿಂದ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ನಿಲ್ಲಿಸಿದ್ದು, ಸದ್ಯ ನಿತ್ಯ ಕೇವಲ ಕೇವಲ 4 ಘಟಕಗಳಿಂದ 480 ರಿಂದ 500 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ.

ಇಂದಿಗೆ 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಮಾತ್ರ ಸ್ಟಾಕ್ ಇದ್ದು, ಕೇವಲ ನಾಲ್ಕು ಘಟಕಗಳಿಗೆ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಎಂಟು ಘಟಕಗಳು ಉತ್ಪಾದನೆಗೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕ್ ಕಲ್ಲಿದ್ದಲು ಬರುತ್ತಿತ್ತು.

ಪ್ರಸ್ತುತ ಕೇವಲ 3 ರಿಂದ 4 ರೇಕ್ ಕಲ್ಲಿದ್ದಲು ಬರುತ್ತಿದೆ. ಇಂದು ಕಲ್ಲಿದ್ದಲು ಬಾರದಿದ್ದರೆ ವಿದ್ಯುತ್ ಉತ್ಪಾದಿಸುತ್ತಿರುವ 4 ಘಟಕಗಳೂ ಬಂದ್ ಆಗುವ ಆತಂಕ ಎದುರಾಗಿದೆ. ಇನ್ನು ವೈಟಿಪಿಎಸ್ ಒಂದೇ ಘಟಕದಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ. 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಎರಡು ದಿನಕ್ಕೆ ಮಾತ್ರ ಸಾಕಾಗಲಿದೆ. ಹೀಗಾಗಿ ರಾಜ್ಯಕ್ಕೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆ ಇದೆ ಎಂದು ಆರ್‌ಟಿಪಿಎಸ್ ಘಟಕದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಬಳ್ಳಾರಿಯ ಆರ್‌ಟಿಪಿಎಸ್‌ನಲ್ಲೂ ಕಲ್ಲಿದ್ದಲು ಕೊರತೆ:
ಬಳ್ಳಾರಿ ಥರ್ಮಲ್ ಪವರ್ ಪ್ಲಾಂಟ್ (ಬಿಟಿಪಿಎಸ್) ಮೂರು ಘಟಕಗಳಿಂದ ನಿತ್ಯ 1700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಮರ್ಥ್ಯ ಹೊಂದಿದೆ.

ಆದರೆ, ಕಲ್ಲಿದ್ದಲು ಅಭಾವದಿಂದಾಗಿ ಒಂದೇ ಘಟಕ ಚಾಲ್ತಿಯಲ್ಲಿದ್ದು, ಎರಡು ಘಟಕ ಸ್ಥಗಿತಗೊಂಡಿವೆ. ಸದ್ಯ ಆರಂಭದಲ್ಲಿರುವ ಒಂದು ಘಟಕದಿಂದ ನಿತ್ಯ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಸದ್ಯ ಬಿಟಿಪಿಎಸ್‌ನಲ್ಲಿ 15 ಸಾವಿರ ಟನ್ ಕಲ್ಲಿದ್ದಲು ಸ್ಟಾಕ್ ಇದ್ದು, ಒಂದು ಘಟಕ ನಡೆಯಲು ದಿನಕ್ಕೆ 8 ಸಾವಿರ ಟನ್ ಕಲ್ಲಿದ್ದಲು ಬೇಕು. ಸದ್ಯ ಇರುವ ಸ್ಟಾಕ್ ಗೆ ಕೇವಲ ಇನ್ನೆರಡು ದಿನ ಮಾತ್ರ ಒಂದು ಘಟಕ ಕಾರ್ಯ ಮಾಡಬಹುದಾಗಿದೆ.

ನಾಳೆ ನಾಡಿದ್ದು ಮತ್ತೆ ಕಲ್ಲಿದ್ದಲು ಬರಬಹುದು. ಒಂದು ವೇಳೆ ಕಲ್ಲಿದ್ದಲು ಬಾರದೆ ಹೊದಲ್ಲಿ ಆ ಒಂದು ಘಟಕವೂ ಸ್ಥಗಿತ ಸಾಧ್ಯತೆ ಇದೆ ಎಂದು ಎಂದು ಬಿಟಿಪಿಎಸ್ ಮೂಲಗಳ ಮಾಹಿತಿ ನೀಡಿವೆ.


Spread the love

LEAVE A REPLY

Please enter your comment!
Please enter your name here