ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಕೊರೊನಾ ಹಾವಳಿ ಇನ್ನೂ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ. ಹೀಗಾಗಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ಹಲವು ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸದ್ಯ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಕೊರೊನಾ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೂ. 5 ಅಥವಾ 6ರ ವೇಳೆಗೆ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ನೋಡಿಕೊಂಡು ಸರ್ಕಾರವು ಲಾಕ್ ಡೌನ್ ಮುಂದುವರೆಸುವ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಲಾಕ್ ಡೌನ್ ವಿಸ್ತರಿಸುವ ಕುರಿತು ತಜ್ಞರು ಹಾಗೂ ಸಚಿವರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಹಾಮಾರಿಯ ಅಟ್ಟಹಾಸ ಇನ್ನೂ ನಿಂತಿಲ್ಲ. ಲಾಕ್ ಡೌನ್ ವಿಸ್ತರಣೆ ಮಾಡಿ ಎಂದು ತಜ್ಞರು ಇಲ್ಲಿಯವರೆಗೂ ಯಾವುದೇ ವರದಿ ನೀಡಿಲ್ಲ. ಹೀಗಾಗಿ ಲಾಕ್ ಡೌನ್ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಎಲ್ಲವೂ ಮೇ. 5 ಅಥವಾ 6ರಂದು ನಿರ್ಧಾರ ಮಾಡಿ ಹೇಳಲಾಗುವುದು ಎಂದು ಹೇಳಿದ್ದಾರೆ.
ಸದ್ಯ ಹಲವು ಜಿಲ್ಲೆಗಳಲ್ಲಿ ಇನ್ನೂ ಕೊರೊನಾ ನಿಂತಿಲ್ಲ. ಇದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಇನ್ನೊಂದೆಡೆ ಕೇಂದ್ರದಿಂದ ಜೂ. 30ರ ವರೆಗೂ ಲಾಕ್ ಮುಂದುವರೆಸಬೇಕೆಂಬ ಸೂಚನೆ ಬಂದಿದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಸರ್ಕಾರ ಲಾಕ್ ಡೌನ್ ಮುಂದುವರೆಸುವ ಚಿಂತನೆಯಲ್ಲಿ ಇದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ.