ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಪ್ರತಿಭೆ ಯಾರ ಸ್ವತ್ತೂ ಅಲ್ಲ, ಪ್ರತಿಭೆಗೆ ಬಡತನ, ಸಿರಿತನದ ಬೇಧವಿಲ್ಲ. ಬಡತನದ ಬೇಗುದಿಯಲ್ಲೇ ಬೆಳೆದ ಕ್ರೀಡಾ ಪ್ರತಿಭೆಯೊಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ರಾಜ್ಯವನ್ನು, ಅದರಲ್ಲೂ ಕಲ್ಯಾಣ ಕರ್ನಾಟಕವನ್ನು ಬೆಳಗಲು ಸಹಾಯಹಸ್ತ ಬೇಕಿದೆ.
ತಾಲೂಕಿನ ಗಬ್ಬೂರು ಗ್ರಾಮದ ಎರಿಸ್ವಾಮಿ ಹರಿಜನ ಎಂಬ ಗ್ರಾಮೀಣ ಯುವ ಪ್ರತಿಭೆ ರಾಷ್ಟ್ರ ಮಟ್ಟದ ಥ್ರೋ ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ.
ಗದಗ ನಗರದ ಶ್ರೀ ಪ್ರಭುರಾಜೇಂದ್ರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಪಿ.ಈಡಿ ಓದುತ್ತಿರುವ ಎರಿಸ್ವಾಮಿ ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ರಾಜ್ಯ ಥ್ರೋ ಬಾಲ್ ಅಸೋಸಿಯೇಷನ್ ಕೈಗೊಂಡಿದ್ದ ಥ್ರೋ ಬಾಲ್ ಸೀನಿಯರ್ ವಿಭಾಗದ ತಂಡಕ್ಕೆ ಆಯ್ಕೆಯಾಗಿದ್ದರು. ಈ ಮೂಲಕ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಆಯ್ಕೆಯಾದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆ ಎರಿಸ್ವಾಮಿಗೆ ಸಲ್ಲುತ್ತದೆ.
ಇದೇ ಅಕ್ಟೋಬರ್ 29 ರಿಂದ 31 ರವರೆಗೆ ಹರಿಯಾಣ ರಾಜ್ಯದ ರೋಥಕ್ ಎಂ.ಡಿ. ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸೀನಿಯರ್ ಥ್ರೋ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಬಡತನದ ಕುಟುಂಬದಲ್ಲಿ ಜನಿಸಿ ಈ ಮಟ್ಟಕ್ಕೆ ಸಾಧನೆ ಮಾಡುವ ಮೂಲಕ ಗಬ್ಬೂರು ಗ್ರಾಮಕ್ಕೆ ಹಾಗೂ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದ ಎರಿಸ್ವಾಮಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಸಹಾಯದ ನೀರೀಕ್ಷೆ:
ಎರಿಸ್ವಾಮಿಗೆ ಅ.25 ರಿಂದ 29 ರವರೆಗೆ ಪರೀಕ್ಷೆಗಳಿವೆ. ಹಾಗಾಗಿ ಟೀಮ್ನೊಂದಿಗೆ ಹರಿಯಾಣಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಮುಗಿಸಿಕೊಂಡು ಹೋಗಬೇಕೆಂದರೆ ಆರ್ಥಿಕ ಸಮಸ್ಯೆ ಎದುರಾಗಿದೆ. ಹಾಗಾಗಿ ಯಾರಾದರೂ ದಾನಿಗಳು ಮುಂದೆ ಬಂದು ಈ ಕ್ರೀಡಾ ಪಟುಗೆ ಸಹಾಯ ಮಾಡಿದರೆ ಆತ ಇನ್ನಷ್ಟು ಸಾಧನೆ ಮಾಡಲು ನೆರವು ನೀಡಿದಂತಾಗುತ್ತದೆ. ಹೆಚ್ಚಿನ ಮಾಹಿತಿಗೆ ಎರಿಸ್ವಾಮಿ ಸಂಪರ್ಕಿಸಿ: 97411 69676