ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಎನಿಸಿರುವ ವಿಧಾನಸೌಧದಲ್ಲಿ ಅಧಿವೇಶನ ಶುರುವಾಗಿದೆ. ಇತ್ತ ಬೆಂಗಳೂರಿನ ಬೀದಿಯಲ್ಲಿ ಜನಶಕ್ತಿ ಪ್ರತಿಬಿಂಬಿಸುವ ಜನತಾ ಅಧಿವೇಶನವೂ ಚಾಲೂ ಆಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ರೈತರು, ಕಾರ್ಮಿಕರು, ದಲಿತರು ಮತ್ತು ಭೂ-ವಸತಿ ವಂಚಿತರು-ಹೀಗೆ ಅನ್ಯಾಯಕ್ಕೆ ಒಳಗಾದ ಎಲ್ಲ ಸಮುದಾಯಗಳ ಜನತೆ ರಾಜಧಾನಿಯಲ್ಲಿ ಇಂದಿನಿಂದ ಜನತಾ ಅಧಿವೇಶನ ಆರಂಭಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯದ ಹಲವು ಸಂಘಟನೆಗಳು ಸೋಮವಾರ ಬೆಂಗಳೂರಿನಲ್ಲಿ ಐಕ್ಯ ಹೋರಾಟವನ್ನು ಹಮ್ಮಿಕೊಂಡಿವೆ.
ರಾಜ್ಯ ಸರ್ಕಾರ ಈ ಕೂಡಲೇ ರೈತವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯದಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಉಳಿಯುವುದಿಲ್ಲ ಎಂದು ಈ ಸಂಘಟನೆಗಳ ನಾಯಕರು ಎಚ್ಚರಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಜೊತೆಗೆ ಈಗಾಗಲೇ ಸುಗ್ರೀವಾಜ್ಞೆ ಮೂಲಕ ತಂದಿರುವ ಕೆಲವು ಮಸೂದೆಗಳಿಗೆ ಅಧಿಕೃತವಾಗಿ ಅಂಗೀಕಾರ ಪಡೆಯುವ ಸಾಧ್ಯತೆಯಿದೆ. ಇದರಲ್ಲಿ ಕೃಷಿ ಸಂಬಂಧಿತ ಮಸೂದೆಗಳೂ ಸೇರಿದ್ದು, ಅವುಗಳು ರೈತವಿರೋಧಿಯಾಗಿವೆ ಎಂದು ರಾಜ್ಯದಾದ್ಯಂತ ಇರುವ ರೈತ, ದಲಿತ, ಕಾರ್ಮಿಕ ಮತ್ತು ಇತರ ಸಂಘಟನೆಗಳು ಒಟ್ಟಾಗಿ ಸೋಮವಾರದಿಂದ ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಂಡಿವೆ.
ಈ ಅನಿರ್ದಿಷ್ಟಾವಧಿ ಧರಣಿಯಲ್ಲಿ ಜನತಾ ಅಧಿವೇಶನ ನಡೆಸಿ, ಚರ್ಚೆ, ಸಂವಾದಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ 39 ಸಂಘಟನೆಗಳ ಹೋರಾಟಗಾರರು ಸೇರಿದಂತೆ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರಾದ ಯೋಗೇಂದ್ರ ಯಾದವ್, ಸಾಹಿತಿ ದೇವನೂರು ಮಹಾದೇವ, ವಿಶ್ರಾಂತ ನ್ಯಾ. ಎಚ್.ಎನ್.ನಾಗಮೋಹನದಾಸ್, ಅಖಿಲಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಡಾ.ಅಶೋಕ್ ದಾವಲೆ, ನೂರ್ ಶ್ರೀಧರ್, ಎಸ್.ಆರ್.ಹಿರೇಮಠ್, ಶಿವಕುಮಾರ್ ಕಕ್ಕಾಚಿ, ಮೈಕೆಲ್ ಬಿ.ಫರ್ನಾಂಡೀಸ್ ಸೇರಿಂದಂತೆ ಹಲವಾರು ಚಿಂತಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.