–ಬಿಯಸ್ಕೆ.
ವಿಶೇಷ ವರದಿ.
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಳೆದ ವರ್ಷದ ಡಿಸೆಂಬರ್‌ನಿಂದ ಜಗತ್ತನ್ನೇ ಬಾಧಿಸುತ್ತಿರುವ ಕೊವಿಡ್-19 ಜನಜೀವನ ಅಸ್ತವ್ಯಸ್ತವಾಗುವಂತೆ ಈಗೀಗಷ್ಟೇ ಮೊದಲಿನ ಜಗತ್ತಿಗೆ ವ್ಯಾಪಾರ-ವಹೀವಾಟುಗಳು ತೆರೆದುಕೊಳ್ಳುತ್ತಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಗರ್ಭಿಣಿಯರಿಗೂ ಸೋಂಕು ಕಾಣಿಸಿಕೊಂಡಿದ್ದು ಆತಂಕದ ವಿಷಯವಾಗಿತ್ತು. ಸಮಾಧಾನದ ಸಂಗತಿ ಎಂದರೆ ಸೋಂಕು ಕಾಣಿಸಿಕೊಂಡು ಮರಣ ಹೊಂದಿದ ಗರ್ಭಿಣಿಯರ, ಬಾಣಂತಿಯರ ಸಂಖ್ಯೆ ಶೂನ್ಯವಾಗಿರುವುದು.
ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಕೊವಿಡ್-19 ಆಸ್ಪತ್ರೆಗಳಿದ್ದು, ಸೋಂಕು ಕಾಣಿಸಿಕೊಂಡರೆ ಈ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆರಂಭದಲ್ಲಿ ಗರ್ಭಿಣಿಯರಿಗೆ ಸೋಂಕು ಕಾಣಿಸಿಕೊಂಡಾಗ ಆಸ್ಪತ್ರೆ ಸಿಬ್ಬಂದಿ ವಿಚಲಿತರಾಗಿದ್ದು ಸತ್ಯ. ಆದರೆ ತಕ್ಷಣವೇ ಜೀವ ಉಳಿಸುವ ನಿಟ್ಟಿನಲ್ಲಿ ಕೊವಿಡ್-19 ಆಸ್ಪತ್ರೆಯ ಭಾಗವೊಂದರಲ್ಲೇ ಹೆರಿಗೆ ಕೋಣೆ ತೆರೆದು ತಾಯಿ-ಶಿಶು ಜೀವ ರಕ್ಷಿಸಿದ್ದಾರೆ.
ಕೊಪ್ಪಳದ ಕೊವಿಡ್-19 ಆಸ್ಪತ್ರೆಯಲ್ಲಿ ಏಪ್ರಿಲ್ ಆರಂಭದಿಂದ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 136 ಜನ ಕೊವಿಡ್-19 ಸೋಂಕಿತ ಗರ್ಭಿಣಿಯರು ದಾಖಲಾಗಿದ್ದರು. ಇವರಲ್ಲಿ 77 ಜನರಿಗೆ ಹೆರಿಗೆಯಾಗಿದ್ದು ಎಲ್ಲ ಶಿಶುಗಳು ಕ್ಷೇಮವಾಗಿವೆ. ನಾಲ್ಕು ಶಿಶುಗಳಿಗೆ ಮೂರು ದಿನಗಳವರೆಗೆ ಸೋಂಕು ಕಾಣಿಸಿಕೊಂಡಿದ್ದು ನಿಜವಾದರೂ ಎದೆ ಹಾಲು ಕುಡಿಯುತ್ತಿದ್ದಂತೆ ಸೋಂಕು ಮಾಯವಾಗಿದೆ. 77 ಹೆರಿಗೆಯಲ್ಲಿ 43 ನಾರ್ಮಲ್ ಹೆರಿಗೆಯಾದರೆ 34 ಸಿಜೇರಿಯನ್ ಹೆರಿಗೆಗಳಾಗಿವೆ.
ಇನ್ನು ಗಂಗಾವತಿ ಕೊವಿಡ್-19 ಆಸ್ಪತ್ರೆಯಲ್ಲಿ ಮೇ ಆರಂಭದಿಂದ ಸೆಪ್ಟೆಂಬರ್ ಅಂತ್ಯದವರೆಗೆ 5 ಜನ ಸೋಂಕಿತ ಗರ್ಭಿಣಿಯರು ದಾಖಲಾಗಿದ್ದರು. 5 ಜನರ ಹೆರಿಗೆ ನಾರ್ಮಲ್ ಆಗಿದ್ದು ಶಿಶುಗಳು ಆರೋಗ್ಯವಾಗಿವೆ.
ಒಟ್ಟಾರೆ ಜಿಲ್ಲೆಯಲ್ಲಿ 136 ಜನ ಕೋವಿಡ್-19 ಸೋಂಕಿತ ಗರ್ಭಿಣಿಯರು ದಾಖಲಾಗಿದ್ದು, 82 ಜನ ಸೋಂಕಿತ ಗರ್ಭಿಣಿಯರ ಹೆರಿಗೆಗಳಾಗಿವೆ. 48 ನಾರ್ಮಲ್ ಮತ್ತು 34 ಸಿಜೆರಿಯನ್ ಹೆರಿಗೆಗಳಾಗಿವೆ. ಹೆರಿಗೆಯ ನಂತರ ಬಾಣಂತಿಯರು ಸೋಂಕಿನಿಂದ ಗುಣಮುಖರಾಗಿದ್ದಾರೆ. 136 ಜನರ ಪೈಕಿ 54 ಜನ ಸೋಂಕಿತ ಗರ್ಭಿಣಿಯರು ಹೆರಿಗೆಗೂ ಮುನ್ನವೇ ಗುಣಮುಖರಾಗಿದ್ದು, ಆನಂತರ ಹತ್ತಿರದ ಆಸ್ಪತ್ರೆಗಳಲ್ಲಿ ಹೆರಿಗೆ ಆಗಿರಬಹುದು.
ಕೊವಿಡ್-19 ಸೋಂಕು ಜಿಲ್ಲೆಯಲ್ಲಿ ಹಂತಹಂತವಾಗಿ ತಹಬದಿಗೆ ಬರುತ್ತಿದೆ. ಜಿಲ್ಲೆಯ ಗರ್ಭಿಣಿಯರಲ್ಲೂ ಸೋಂಕು ಕಾಣಿಸಿಕೊಂಡಿದ್ದು ಹೆರಿಗೆ ಸುಸೂತ್ರವಾಗಿದ್ದು ಸಂತೋಷದ ವಿಷಯ. ಈ ವಿಚಾರದಲ್ಲಿ ಸಾವು-ನೋವು ಸಂಭವಿಸಿಲ್ಲ.
-ಡಾ.ದಾನರಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ, ಕೊಪ್ಪಳ.