ಹಾಡುಹಗಲೇ ಅನ್ನಭಾಗ್ಯ ಅಕ್ಕಿ ಸಾಗಾಟ; ದಂಧೆಯ ರೂವಾರಿ ಏಕನಾಥ್ ಪರಾರಿ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳ ಸಾಗಾಟ ಜಿಲ್ಲೆಯಲ್ಲಿ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಕಳೆದ ಹಲವು ದಿನಗಳಿಂದ ರಾತ್ರೋರಾತ್ರಿ ಕದ್ದು ಮುಚ್ಚಿ ನಡೆಯುತ್ತಿದ್ದ ಸಾಗಾಟ ಈಗ ಹಾಡುಹಗಲೇ ಆರಂಭವಾಗಿದೆ.

ಹೊಸಬರ ಜೊತೆಗೆ ಹಳೆ ಪಂಟರು ಈ ದಂಧೆಗೆ ರೀ ಎಂಟ್ರಿ ಆಗಿರೋದು ಕಳ್ಳದಂಧೆ ಮತ್ತಷ್ಟು ಬೆಳೆಯಲು ಕಾರಣವಾಗಿದೆ. ಅದಕ್ಕೆ ಉದಾಹರಣೆ ಗುರುವಾರ ಮುಂಜಾನೆ ಹುಡ್ಕೋ ಕಾಲೊನಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ತುಂಬಿದ ಗೂಡ್ಸ್ ವಾಹನ ಸಿಕ್ಕಿಬಿದ್ದಿದ್ದು.

ಹುಡ್ಕೋ ಕಾಲೋನಿಯ ಬಸವೇಶ್ವರ ಸ್ಕೂಲ್ ಬಳಿ ಲೋಡ್ ಮಾಡಿಕೊಂಡು ನಿಂತಿದ್ದ ಗೂಡ್ಸ್ ವಾಹನ ಶಹರ ಠಾಣೆಯ ಪೊಲೀಸರ ಕಣ್ಣಿಗೆ ಬಿದ್ದಿದ್ದೇ ತಡ, ಸೀದಾ ವಾಹನವನ್ನು ಠಾಣೆಗೆ ಹೊರಡಿಸಿದ್ದಾರೆ.

ಆರೋಪಿ ಗೂಡ್ಸ್ ವಾಹನದ ಚಾಲಕ ಬೆಟಗೇರಿಯ ಮಂಜುನಾಥ್ ನಗರ ನಿವಾಸಿ ದಿನೇಶ್ ದಾರಾಸಿಂಗ್ ನವಲಗುಂದ ಎಂಬಾತ ಹುಡ್ಕೋದಿಂದ ಸುಮಾರು 77,625 ರೂಪಾಯಿ ಮೌಲ್ಯದ 33 ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿಯನ್ನು ಪ್ಲಾಸ್ಟಿಕ್ ‌ಚೀಲಗಳಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ.

ಈ ಸಂದರ್ಭದಲ್ಲಿ ಶಹರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಗೂಡ್ಸ್ ವಾಹನ ಸಮೇತ ಚಾಲಕ ಬೆಟಗೇರಿಯ ಮಂಜುನಾಥ್ ನಗರದ ನಿವಾಸಿ ದಿನೇಶ್ ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಎರಡನೇ ಆರೋಪಿ ಏಕನಾಥ್ ಪರಾರಿಯಾಗಿದ್ದಾನೆ.

ದಂಧೆಯ ರೂವಾರಿ ಏಕನಾಥ್ ಪರಾರಿ!

ಪ್ರಕರಣದಲ್ಲಿ ಎರಡನೇ ಆರೋಪಿ ಆಗಿರುವ ಬೆಟಗೇರಿಯ ಸೆಟ್ಲಮೆಂಟ್ ನಿವಾಸಿ ಏಕನಾಥ್ ಎಂಬಾತನೇ ಈ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖರೀದಿಸಿ ಅದನ್ನು ಸಾಗಾಟ ಮಾಡುತ್ತಿದ್ದ ರೂವಾರಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಹಲವು ದಿನಗಳಿಂದ ಬೆಟಗೇರಿಯ ಸೆಟ್ಲಮೆಂಟ್ ಏರಿಯಾದಲ್ಲಿ ಈ ದಂಧೆ ಜೋರಾಗಿತ್ತು ಎನ್ನಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮನೆಯೊಂದರಲ್ಲಿ ಅಕ್ಕಿ ಸಂಗ್ರಹಿಸಿ ಅಲ್ಲಿಂದ ಬೆಟಗೇರಿಯ ನೇಕಾರ ನಗರದ ಪಳಗಿದ ಅಸಾಮಿ ಮೂಲಕ ಈ ಅಕ್ಕಿ ಬೇರೆ ಕಡೆ ಸಾಗಾಟ ಮಾಡಲಾಗುತ್ತಿದೆ ಎನ್ನಲಾಗಿದೆ.

ಪೊಲೀಸರು ಸಾರ್ವಜನಿಕರ ಮೂಲಕ ಈ ದಂಧೆಗೆ ಕಡಿವಾಣ ಹಾಕಲು ಮುಂದಾದರೂ ಆಹಾರ ಇಲಾಖೆಯ ಅಧಿಕಾರಿಗಳಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ ಎನ್ನಲಾಗಿದೆ.

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡುವ ವಾಹನ, ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರೂ ಸ್ವಯಂ ಪ್ರಕರಣ ದಾಖಲು ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ.

ಹೀಗಾಗಿ ಆಹಾರ ಇಲಾಖೆಯ ಅಧಿಕಾರಿಗಳೇ ಬಂದು ದೂರು ಕೊಡಬೇಕು. ಅಂದಾಗ ಎಫ್ಐಆರ್ ದಾಖಲಾಗುತ್ತದೆ. ಆದ್ರೆ ಇದು ಪೊಲೀಸರ ಮೇಲೆ ಸಾರ್ವಜನಿಕರಿಗೆ ಅನುಮಾನ ಹುಟ್ಟಲು ಕಾರಣವಾಗಬಹುದು.

ಏನೇ ಆಗಲಿ ಅಕ್ರಮ ಅಕ್ಕಿ ದಂಧೆಕೋರರ ಹೆಡೆಮುರಿ ಕಟ್ಟಲು ಪೊಲೀಸರ ಜೊತೆಗೆ ಆಹಾರ ಇಲಾಖೆಯ ಅಧಿಕಾರಿಗಳು ಮುಂದಾದಾಗ ಇಂತಹ ಅಕ್ರಮಕ್ಕೆ ಕಡಿವಾಣ ಹಾಕಬಹುದು.


Spread the love

LEAVE A REPLY

Please enter your comment!
Please enter your name here