
ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಹಾಫ್ ನಾಲೆಡ್ಜ್ ಇಸ್ ಡೇಂಜರ್. ಮಂತ್ರಿಯಾದವರಿಗೆ ಯಾವುದೇ ವಿಷಯದ ಬಗ್ಗೆ ಹಾಫ್ ನಾಲೆಡ್ಜ್ ಇರಬಾರದು. ಅದು ರಾಜ್ಯಕ್ಕಾಗುವ ಅವಮಾನ. ಹಾಲಪ್ಪ ಆಚಾರ್ ಈಗ ಬರೀ ಶಾಸಕ ಅಲ್ಲ, ಮಂತ್ರಿಯಾಗಿದ್ದಾರೆ. ಮಾತನಾಡುವಾಗ ಅರ್ದಂಬರ್ಧ ಮಾತನಾಡಬಾರದು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಲೇವಡಿ ಮಾಡಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ಬಿ ಸ್ಕೀಮ್‌ಗೆ ಸಂಬಂಧಿಸಿದಂತೆ 1997-98ರಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇನೆ. ಈಗಲೂ ಅಧಿಕೃತ ದಾಖಲೆಗಳು ನನ್ನ ಬಳಿ ಇವೆ. ಕೊಪ್ಪಳ ಭಾಗಕ್ಕೆ ಬಿ ಸ್ಕೀಂನಡಿ ನೀರಾವರಿ ಮಾಡಲು ಅಡ್ಡಿಯಾಗಿದ್ದೇ ಬಿಜೆಪಿ. ತಮ್ಮ ತಪ್ಪನ್ನು ಮರೆ ಮಾಚಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ರಾಯರಡ್ಡಿ ಕಿಡಿ ಕಾರಿದರು.
ಕೃಷ್ಣಾ ನ್ಯಾಯಾಧೀಕರಣದ ನೀರನ್ನು ಈ ಭಾಗಕ್ಕೆ ಹರಿಸಲು ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮೊದಲು ಒತ್ತಾಯಿಸಿದ್ದೇ ನಾನು ಎಂದ ಅವರು ಹೇಳಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಬಗ್ಗೆ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ತೆರಳಲು ಕರೆ ನೀಡಿದರೆ, ವಿರೋಧಿಸಿದ್ದ ಬಿಜೆಪಿ, ಈಗ ಚುನಾವಣೆ ಹತ್ತಿರವಾಗುತ್ತಿದ್ದು, ಸರ್ವ ಪಕ್ಷ ನಿಯೋಗ ಕರೆದೊಯ್ಯುವ ಚಿಂತನೆ ಬಿಜೆಪಿ ಸರಕಾರಕ್ಕೆ ಈಗ ಬಂದಿದೆ. ಬಿಜೆಪಿಗೆ ಈಗಲಾದರೂ ಬುದ್ಧಿ ಬಂದಿದೆ. ಆದರೆ ತುಂಬಾ ತಡವಾಗಿ ಬುದ್ಧಿ ಬಂದಿದೆ. ಪರವಾಗಿಲ್ಲ. ಈ ವಿಷಯದಲ್ಲಿ ಬಿಜೆಪಿಯ ನಿಲುವನ್ನು ಸ್ವಾಗತಿಸುವುದಾಗಿ ರಾಯರಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಸದಸ್ಯರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು ಹಾಗೂ ವಕ್ತಾರ ರವಿ ಕುರಗೋಡ ಇದ್ದರು.