ಹುಬ್ಬಳ್ಳಿಯಲ್ಲಿ ಮಿತಿಮೀರಿದ ಟಿಪ್ಪರ್ ಹಾವಳಿ; ಸಾವಿನ ದವಡೆಯಿಂದ ಬೈಕ್ ಸವಾರ ಪಾರು!

0
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

Advertisement

ಅವು ದೈತ್ಯಾಕಾರದ ಗಾಡಿಗಳು, ರಸ್ತೆಯಲ್ಲಿ ಬಂದರೆ ಯಮ ಸ್ವರೂಪಿಯಂತೆ ಭಾಸವಾಗುತ್ತವೆ. ಮಗ್ಗಲಲ್ಲಿ ಹಿಂದೆ ಮುಂದೆ ಯಾರಿದ್ದರೇನೂ ಯಾವ ಗಾಡಿಗಳಿದ್ದರೇನು ನುಗ್ಗುವುದೊಂದೆ ಅದರ ಕೆಲಸ. ಇದರ ಭಾರಕ್ಕೆ ರಸ್ತೆ ಕಿತ್ತುಕೊಂಡು ಬಂದರೆ, ಹೋಗುವ ರಭಸಕ್ಕೆ ಮಗ್ಗುಲಲ್ಲಿ ಹೋಗುವವರ ಎದೆ ಒಂದು ಕ್ಷಣ ಝಲ್ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಇತ್ತೀಚಿಗೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚುತ್ತಿದೆ. ಟಿಪ್ಪರ್‌ಗಳಲ್ಲಿ ಮಿತಿಮಿರಿ ಸಾಮಾಗ್ರಿಗಳನ್ನು ತುಂಬುತ್ತಿರುವುದರಿಂದ ರಸ್ತೆಯ ಇಕ್ಕಲಗಳೆಲ್ಲಾ ಗುಂಡಿಗಳಿಂದ ಆವೃತವಾಗಿವೆ. ಇದರಿಂದ ದಿನಕ್ಕೊಬ್ಬರಾದ್ರೂ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅಧಿಕಾರಿಗಳ ನಿರ್ಲಕ್ಷ್ಯವೋ ಟಿಪ್ಪರ್ ಚಾಲಕರ ಬೇಜವಾಬ್ದಾರಿತನವೋ ಗೊತ್ತಿಲ್ಲ.

ಅತಿಯಾದ ಹೊರೆಹೊತ್ತು ನಗರದೊಳಗೆ ರಾಜಾರೋಷವಾಗಿ ನುಗ್ಗುವ ಟಿಪ್ಪರ್‌ಗಳ ಬಗ್ಗೆ ಪೊಲೀಸರಿಗೆ ಚೆನ್ನಾಗಿಯೇ ಗೊತ್ತಿದೆ. ಆದರೂ, ಟಿಪ್ಪರ್‌ಗಳಿಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಇದಕ್ಕೆ ಕಾರಣ ಬೇರೆಯದ್ದೇ ಇದೆ ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಟಿಪ್ಪರ್‌ಗಳ ಹಾವಳಿಯಿಂದಾಗಿ ದಾರಿ ಹೋಕರು ಮತ್ತು ಸಣ್ಣಪುಟ್ಟ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ವಾತಾವರಣ ಸೃಷ್ಠಿಯಾಗಿದೆ.

ಇಂತಹದ್ದೇ ಒಂದು ದುರ್ಘಟನೆ ಹುಬ್ಬಳ್ಳಿಯಲ್ಲಿ ಶನಿವಾರ ನಡೆದಿದೆ. ಇಲ್ಲಿನ ಗೋಕುಲ್ ರಸ್ತೆಯ ಬಸವೇಶ್ವರ ನಗರದ ನಿವಾಸಿ ರಾಕೇಶ್ ಕುಲಕರ್ಣಿ ಎಂಬ ಯುವಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಸಿವಿಲ್ ಇಂಜನಿಯರಿಂಗ್ ವಿದ್ಯಾರ್ಥಿಯಾಗಿರುವ ರಾಕೇಶ್ ಅವರ ಸ್ಕೂಟರ್ ಹಾಗೂ ನರೇಶ ನಾಯಕ್ ಮಾಲಿಕತ್ವದ ಟಿಪ್ಪರ್ ಮಧ್ಯೆ ಶನಿವಾರ ಮುಂಜಾನೆ ಅಪಘಾತ ಸಂಭವಿಸಿದೆ. ರಾಕೇಶ್ ಸಾವಿನ ದವಡೆಯಿಂದ ಪಾರಾಗಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಅಪಘಾತಗೊಂಡಿರುವ ಲಾರಿ ಕಲಘಟಗಿ ತಾಲ್ಲೂಕಿನ ಎಮ್ಮೆಟ್ಟಿ ಕಲ್ಲಿನ ಗಣಿಯಿಂದ ಜಲ್ಲಿ ತುಂಬಿಕೊಂಡು ಹುಬ್ಬಳ್ಳಿಯ ಬೈಪಾಸ್‌ನಿಂದ ಗೋಕುಲ ರಸ್ತೆಯ ಮಾರ್ಗವಾಗಿ ಮಾರಡಗಿ ಗ್ರಾಮಕ್ಕೆ ಹೋಗುತ್ತಿತ್ತು. ಟಿಪ್ಪರ್ ಚಾಲಕ ತಿರುವಿನಲ್ಲಿ ಹಠಾತ್ತಾಗಿ ತಿರುವಿದ್ದರಿಂದ ಲಾರಿಯ ಹಿಂಬದಿ ಟೈಯರ್‌ಗೆ ಸಿಲುಕಿಕೊಂಡ ರಾಕೇಶ್ ಕಿರುಚಾಡಿದ್ದರಿಂದಾಗಿ ಚಾಲಕ ಲಾರಿ ನಿಲ್ಲಿಸಿದ್ದಾನೆ. ಇದರಿಂದ ರಾಕೇಶ್ ಜೀವ ಉಳಿಯಿತು.

ಮಿತಿಮೀರಿ ಜಲ್ಲಿ ತುಂಬಿದ ಭಾರೀ ಗಾತ್ರದ ಟಿಪ್ಪರ್‌ಗಳು ನಗರದೊಳಗೆ ಸಂಚರಿಸುತ್ತಿರುವುದರಿಂದ ಜನರ ಜೀವಕ್ಕೆ ಕಂಟಕವಾಗುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಟಿಪ್ಪರ್ ಹಾವಳಿಗೆ ಕಟಿವಾಣ ಹಾಕಿ ಜನರ ಜೀವ ರಕ್ಷಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here