ನವದೆಹಲಿ: ರಾಜಸ್ಥಾನ ರಾಯಲ್ಸ್ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಐಪಿಎಲ್ 2026ರ ಆವೃತ್ತಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲೇ ಟೂರ್ನಿಯ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಅವರು, ವಿವಿಧ ಪ್ರಶಸ್ತಿಗಳು, ಪಂದ್ಯ ಶುಲ್ಕ ಹಾಗೂ ನಗದು ಬಹುಮಾನಗಳ ಮೂಲಕ ಒಟ್ಟು 3.10 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿರುವುದಾಗಿ ವರದಿಯಾಗಿದೆ.
2025ರ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 1.10 ಕೋಟಿ ರೂ. ಮೊತ್ತಕ್ಕೆ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಆ ಹೂಡಿಕೆಗೆ ತಕ್ಕ ಪ್ರತಿಫಲವಾಗಿ ವೈಭವ್ ಇಡೀ ಟೂರ್ನಿಯಲ್ಲಿ ಬ್ಯಾಟ್‌ನಿಂದ ರನ್ ಮಳೆ ಸುರಿಸಿದರು. 776 ರನ್ ಕಲೆಹಾಕುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡ ಅವರು, ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ (ಎಂವಿಪಿ) ಪ್ರಶಸ್ತಿಯನ್ನೂ ಗೆದ್ದರು.
ಆರೆಂಜ್ ಕ್ಯಾಪ್ ವಿಜೇತರಾಗಿ 10 ಲಕ್ಷ ರೂ. ನಗದು ಬಹುಮಾನ ಪಡೆದ ವೈಭವ್, ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ 15 ಲಕ್ಷ ರೂ. ಬಹುಮಾನ ಪಡೆದರು. ಜೊತೆಗೆ ಅತ್ಯುತ್ತಮ ಸ್ಟ್ರೈಕ್‌ರೇಟ್ ದಾಖಲಿಸಿ ‘ಸೂಪರ್ ಸ್ಟ್ರೈಕರ್’ ಗೌರವಕ್ಕೂ ಪಾತ್ರರಾದರು. ಈ ಪ್ರಶಸ್ತಿಯೊಂದಿಗೆ ಟಾಟಾ ಸಿಯೆರಾ ಕಾರು ಕೂಡ ಅವರಿಗೆ ಲಭಿಸಿದೆ.
ಇದೇ ವೇಳೆ, ಟೂರ್ನಿಯಲ್ಲಿ 75 ಸಿಕ್ಸರ್‌ಗಳನ್ನು ಸಿಡಿಸಿ ‘ಸೂಪರ್ ಸಿಕ್ಸರ್’ ಪ್ರಶಸ್ತಿಯನ್ನು ಗೆದ್ದ ಅವರು 10 ಲಕ್ಷ ರೂ. ನಗದು ಬಹುಮಾನ ಪಡೆದರು. ಟೂರ್ನಿಯ ಅತ್ಯುತ್ತಮ ಉದಯೋನ್ಮುಖ ಆಟಗಾರ ಪ್ರಶಸ್ತಿಯೂ ವೈಭವ್ ಪಾಲಾಗಿದ್ದು, ಇದಕ್ಕಾಗಿ ಮತ್ತೊಂದು 10 ಲಕ್ಷ ರೂ. ಬಹುಮಾನ ದೊರಕಿದೆ.
ರಾಜಸ್ಥಾನ ರಾಯಲ್ಸ್ ಪರ ಆಡಿದ 16 ಪಂದ್ಯಗಳಿಗೆ ಪಂದ್ಯ ಶುಲ್ಕ ಹಾಗೂ ಪ್ಲೇಆಫ್ ಬೋನಸ್ ಸೇರಿ ಸುಮಾರು 1.20 ಕೋಟಿ ರೂ. ಗಳಿಸಿದ್ದಾರೆ. ಇದಲ್ಲದೆ, ವಿವಿಧ ಪಂದ್ಯಗಳಲ್ಲಿ ‘ಪ್ಲೇಯರ್ ಆಫ್ ದಿ ಮ್ಯಾಚ್’ ಸೇರಿದಂತೆ ಪಡೆದ ವೈಯಕ್ತಿಕ ಪ್ರಶಸ್ತಿಗಳ ನಗದು ಮೊತ್ತವೂ ಅವರ ಒಟ್ಟು ಆದಾಯವನ್ನು 3.10 ಕೋಟಿ ರೂ. ಗಡಿ ದಾಟಿಸಿದೆ.
ವೈಭವ್ ಸೂರ್ಯವಂಶಿ ಈ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಐಪಿಎಲ್ ಇತಿಹಾಸದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಪವರ್‌ಪ್ಲೇ ಅವಧಿಯಲ್ಲೇ 500ಕ್ಕೂ ಹೆಚ್ಚು ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ನಿರ್ಮಿಸಿದ್ದಾರೆ.
ಇನ್ನೂ ಒಂದೇ ಐಪಿಎಲ್ ಸೀಸನ್‌ನಲ್ಲಿ 72ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಬ್ಯಾಟಿಂಗ್‌ನಲ್ಲಿ ತೋರಿದ ಅಸಾಧಾರಣ ಪ್ರದರ್ಶನದಿಂದ ರಾಜಸ್ಥಾನ ರಾಯಲ್ಸ್ ಹೂಡಿಕೆ ಮಾಡಿದ 1.10 ಕೋಟಿ ರೂ. ಮೊತ್ತಕ್ಕೆ ಪ್ರತಿಯಾಗಿ ಸುಮಾರು 34.97 ಕೋಟಿ ರೂ. ಮೌಲ್ಯದ ಪ್ರದರ್ಶನ ನೀಡಿದ್ದಾರೆ ಎಂದು ಕ್ರೀಡಾ ವಿಶ್ಲೇಷಕರು ಅಂದಾಜಿಸಿದ್ದಾರೆ.
ಈ ಅಂಕಿ-ಅಂಶಗಳ ಆಧಾರದಲ್ಲಿ ಐಪಿಎಲ್ 2026ರಲ್ಲಿ ಅತ್ಯಂತ ಲಾಭದಾಯಕ ಹೂಡಿಕೆಗಳ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಶುಭಮನ್ ಗಿಲ್ ಮೊದಲ ಹಾಗೂ ರಜತ್ ಪಾಟಿದಾರ್ ಎರಡನೇ ಸ್ಥಾನದಲ್ಲಿದ್ದಾರೆ. ಯುವ ವಯಸ್ಸಿನಲ್ಲೇ ವೈಭವ್ ತೋರಿದ ಈ ಸಾಧನೆ ಭಾರತೀಯ ಕ್ರಿಕೆಟ್ ಭವಿಷ್ಯದ ಭರವಸೆಯ ಸಂಕೇತವೆಂದು ಪರಿಗಣಿಸಲಾಗುತ್ತಿದೆ.



