HomeGadag Newsಮಂಜುನಾಥ ನಗರಕ್ಕೆ ₹1 ಕೋಟಿ ಮೂಲಸೌಕರ್ಯದ ಕೊಡುಗೆ

ಮಂಜುನಾಥ ನಗರಕ್ಕೆ ₹1 ಕೋಟಿ ಮೂಲಸೌಕರ್ಯದ ಕೊಡುಗೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಗದಗ-ಬೆಟಗೇರಿ ನಗರದ 4ನೇ ವಾರ್ಡ್‌ನ ಮಂಜುನಾಥ ನಗರದ ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯವನ್ನು ಸರ್ಕಾರ ಪ್ರಾಮಾಣಿಕವಾಗಿ ಕೈಗೊಂಡಿದ್ದು, ಜನರ ಅನುಕೂಲಕ್ಕಾಗಿ ಒಂದು ಕೋಟಿ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆಗಳು ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಹಿರಿಯ ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಬೆಟಗೇರಿಯ 4ನೇ ವಾರ್ಡ್‌ನ ಮಂಜುನಾಥ ನಗರದಲ್ಲಿ ಲೆಕ್ಕ ಶೀರ್ಷಿಕೆ 8443 ಠೇವಣಿ ವಂತಿಕೆ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಒಂದು ಕೋಟಿ ರೂ. ವೆಚ್ಚದ ಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗದಗ-ಬೆಟಗೇರಿ ನಗರಸಭೆಯ ಸದಸ್ಯೆ ಶ್ರೀಮತಿ ಶಕುಂತಲಾ ಅಕ್ಕಿ ಅವರು ವಾರ್ಡ್‌ನ ಬಡ ಜನರಿಗೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ನಗರಸಭೆಯಿಂದ ಹೆಚ್ಚುವರಿಯಾಗಿ 27 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಿರುವುದು, ತಮ್ಮ ವಾರ್ಡ್‌ನ ಜನತೆಯ ಮೇಲಿರುವ ಅವರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಎಚ್.ಕೆ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ವಾರ್ಡ್‌ನ ಹಲವೆಡೆ ಬೋರ್‌ವೆಲ್ ಕೊರೆಸಿ ಜನರಿಗೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವುದು ಹಾಗೂ ಹಲವು ರಸ್ತೆಗಳನ್ನು ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಈ ಭಾಗದ ಜನರ ಮನ ಮೆಚ್ಚುವಂತೆ ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಂಬರುವ ಜನವರಿ ತಿಂಗಳೊಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಂಡು ಉದ್ಘಾಟನೆಯಾಗಬೇಕು ಹಾಗೂ ಜನರಿಗೆ ಅಗತ್ಯ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಎಚ್.ಕೆ.ಪಾಟೀಲ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರ್ಡ್ ಸದಸ್ಯೆ ಶ್ರೀಮತಿ ಶಕುಂತಲಾ ಹೊಳಬಸಪ್ಪ ಅಕ್ಕಿ ಮಾತನಾಡಿ, ತಮ್ಮನ್ನು ಆಯ್ಕೆ ಮಾಡಿದ ವಾರ್ಡ್‌ನ ಜನತೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನಿರಂತರ ಸಹಕಾರ ನೀಡುತ್ತಿರುವ ಶಾಸಕ ಎಚ್.ಕೆ. ಪಾಟೀಲ ಅವರನ್ನು ಸ್ಮರಿಸಿದರು.

ವಾರ್ಡ್‌ನ ಜನತೆಗೆ ಸರ್ಕಾರ ಹಾಗೂ ನಗರಸಭೆಯಿಂದ ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಈ ಭಾಗದ ಜನರ ಸಹಕಾರ ಮನೋಭಾವವನ್ನು ಅವರು ಶ್ಲಾಘಿಸಿದರು.

ಮಂಜುನಾಥ ನಗರದ ಫಾರೂಕ್ ಮಸೀದಿಯಿಂದ ಗೌರಿಗಣೇಶ ಶಾಲೆಯವರೆಗೆ ಗುಣಮಟ್ಟದ ಸಿಮೆಂಟ್ ರಸ್ತೆ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ಸಿ.ಸಿ. ಚರಂಡಿ ನಿರ್ಮಾಣ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ 348 ಮೀಟರ್ ಉದ್ದದ ಐದು ಸಿ.ಸಿ. ರಸ್ತೆಗಳು, 1,137 ಮೀಟರ್ ಉದ್ದದ ಸಿ.ಸಿ. ಚರಂಡಿಗಳು ಹಾಗೂ ಹೈಮಾಸ್ಟ್ ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಪ್ರಕಾಶ ವೆರ್ಣೆಕರ, ಶಂಕರಸಿಂಗ್ ರಜಪೂತ, ಹೀರಾಲಾಲಸಾ ಮೇರವಾಡೆ, ಶಿವಯ್ಯ ಶಿವಪ್ಪಯ್ಯಮಠ, ಸೂರಜ್ ಜಮಾದಾರ, ಮಹ್ಮದ ಶಾಲಗಾರ, ಶೇಡುಸಿಂಗ್ ಜಮಾದಾರ ಹಾಗೂ ಬಸವರಾಜ ಕುಂದಗೋಳ ಪಾಲ್ಗೊಂಡಿದ್ದರು.

ಸಿದ್ದಣ್ಣ ಮೇಳನವರ ಸ್ವಾಗತಿಸಿದರು. ವಾಸುದೇವ ಹುಣಸಿಮರದ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೊಳಬಸಪ್ಪ ಅಕ್ಕಿ, ಸುದೀಪ ಕಣವಿ, ಹುಲ್ಲೇಶ ಬಜಂತ್ರಿ, ನಿಂಗಪ್ಪ ಕರಮುಡಿ ಸೇರಿದಂತೆ ಗಣ್ಯರು, ಈ ಭಾಗದ ನಾಗರಿಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.

ಬಡವರು ವಾಸಿಸುವ ಪ್ರದೇಶಗಳಿಗೂ ಗುಣಮಟ್ಟದ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಮಂಜುನಾಥ ನಗರದಲ್ಲಿ ಆರಂಭವಾಗಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು.

ಎಚ್.ಕೆ. ಪಾಟೀಲ, ಶಾಸಕ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img