ಹಾಸನ: ಕಾಫಿ ಎಸ್ಟೇಟ್‌ನಲ್ಲಿ ಗುಂಡೇಟಿನಿಂದ ಕಾಫಿ ಬೆಳೆಗಾರನೊಬ್ಬ ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಬಂದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಕೇಶವಶೆಟ್ಟಿ (61) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಬಂದೂಕು ಹಿಡಿದು ಕಾಫಿ ತೋಟಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಕೈಯಲ್ಲಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿ ಕೇಶವಶೆಟ್ಟಿ ಅವರ ಮೃತದೇಹ ಪತ್ತೆಯಾಗಿದೆ. ಗುಂಡು ಸಿಡಿದ ಬಳಿಕ ಗಾಯಗೊಂಡ ಅವರು ಕೆಲ ದೂರ ನಡೆದುಕೊಂಡು ಬಂದು ನಂತರ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಗುಂಡು ಸಿಡಿದ ಸ್ಥಳದಲ್ಲಿ ಅವರ ಮೊಬೈಲ್ ಪತ್ತೆಯಾಗಿದ್ದು, ಮೃತದೇಹ ಬಿದ್ದಿದ್ದ ಸ್ಥಳದಿಂದ ಕೆಲ ಮೀಟರ್ ಹಿಂದೆ ಬಂದೂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ SOCO ತಂಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



