ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒಂದು ಕಡೆ ಭೂಮಿಯಿಂದ ತಾನಾಗಿಯೇ ಉದ್ಭವಿಸಿದ ಜಾಗೃತ ದೈವದ ಮೇಲಿನ ಅಚಲ ನಂಬಿಕೆ… ಇನ್ನೊಂದು ಕಡೆ ರೈತರ ಬೆವರಿನ ಫಲವಾದ ಜೋಳದ ಸಂಗಟಿಯನ್ನೇ ದೇವರಿಗೆ ನೈವೇದ್ಯವಾಗಿ ಅರ್ಪಿಸುವ ವಿಶಿಷ್ಟ ಸಂಪ್ರದಾಯ… ಜಾತಿ-ಮತಗಳ ಬೇಲಿ ಮೀರಿ ಒಂದೇ ಭಕ್ತಿಯ ಭಾವದಲ್ಲಿ ಒಂದಾಗುವ ಜನತೆ…!
ಇದು ಸಮೀಪದ ಮಾರನಬಸರಿ ಗ್ರಾಮದ ಐತಿಹಾಸಿಕ ಗಡ್ಡಿ ಮಾರುತೇಶ್ವರ ಪಾಲಕಿ ಉತ್ಸವದ ವಿಶೇಷತೆ.
ಗ್ರಾಮೀಣ ಜನಪದ ಸಂಸ್ಕೃತಿ, ಶತಮಾನಗಳ ನಂಬಿಕೆ ಹಾಗೂ ರೈತ ಬದುಕಿನ ಸಂಪ್ರದಾಯದ ಸಂಗಮವಾಗಿರುವ ಗಡ್ಡಿ ಮಾರುತೇಶ್ವರನ ವಾರ್ಷಿಕ ಪಾಲಕಿ ಉತ್ಸವವು ಶ್ರಾವಣ ಮಾಸದ ಮೂರನೇ ಶನಿವಾರದಂದು ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಜರುಗಿತು.
ಗ್ರಾಮದ ದಕ್ಷಿಣ ಭಾಗದ ಹೊಲದಲ್ಲಿರುವ ಗಡ್ಡಿ ಮಾರುತೇಶ್ವರ ಮೂರ್ತಿಯು ಭೂಮಿಯಲ್ಲಿ ತಾನಾಗಿಯೇ ಉದ್ಭವಿಸಿದ ಜಾಗೃತ ದೈವ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಪೂರ್ವಜರ ಕಾಲದಿಂದಲೂ ಶ್ರಾವಣ ಮಾಸದಲ್ಲಿ ವಿಶೇಷ ಆರಾಧನೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಹಿರಿಯರು ತಿಳಿಸಿದರು.
ಉತ್ಸವದ ಅಂಗವಾಗಿ ರೈತರು ಜೋಳ, ಧಾನ್ಯ, ಕಾಳು-ಕಡಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕಾಣಿಕೆಯಾಗಿ ಅರ್ಪಿಸಿದರು. ವಿಶೇಷ ಪೂಜೆ ಬಳಿಕ ಜೋಳದ ಸಂಗಟಿ ಹಾಗೂ ಸಾರಿನ ದಾಸೋಹ ನಡೆಯಿತು.
ಅನ್ನಸಂತರ್ಪಣೆಯ ನಂತರ ಆಂಜನೇಯಸ್ವಾಮಿ ದೇವಸ್ಥಾನದಿಂದ ಅಲಂಕೃತ ಪಾಲಕಿ ಹೊರಟು, ‘ಡೊಳ್ಳಿನ ಮಜಲು’ ವಾದ್ಯ ವೈಭವದೊಂದಿಗೆ ಉದ್ಭವ ಮೂರ್ತಿಯ ಸನ್ನಿಧಾನಕ್ಕೆ ತಲುಪಿತು. ಉತ್ತಮ ಮಳೆ-ಬೆಳೆ, ರೈತರ ಬದುಕಿನಲ್ಲಿ ಸಮೃದ್ಧಿ ಹಾಗೂ ಸಕಲ ಜೀವಿಗಳಿಗೆ ಆರೋಗ್ಯ ದೊರೆಯಲಿ ಎಂದು ಗ್ರಾಮಸ್ಥರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಭಾವೈಕ್ಯತೆಗೆ ಜೀವಂತ ಸಾಕ್ಷಿಯಾದ ಉತ್ಸವ
ಗಡ್ಡಿ ಮಾರುತೇಶ್ವರನ ವಿಶೇಷ ಪೂಜೆ, ಸಂಗಟಿ ದಾಸೋಹ ಹಾಗೂ ಪಾಲಕಿ ಉತ್ಸವದಲ್ಲಿ ಹಿಂದೂ ಬಾಂಧವರೊಂದಿಗೆ ಮುಸ್ಲಿಂ ಸಮುದಾಯದವರೂ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು. ಜಾತಿ-ಮತಗಳ ಭೇದ ಮರೆತು ಎಲ್ಲರೂ ಒಂದಾಗಿ ಸಂಭ್ರಮಿಸಿದ ಈ ಉತ್ಸವವು ಮಾರನಬಸರಿ ಗ್ರಾಮವನ್ನು ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆಯ ಜೀವಂತ ಸಾಕ್ಷಿಯನ್ನಾಗಿ ಮಾಡಿತು.
ಪೂರ್ವಜರ ಕಾಲದಿಂದಲೂ ಗಡ್ಡಿ ಮಾರುತೇಶ್ವರನಿಗೆ ವಿಶೇಷ ಆಚರಣೆ ನಡೆಸಿಕೊಂಡು ಬರುತ್ತಿದ್ದೇವೆ. ರೈತರ ಬೆವರಿನೊಂದಿಗೆ ಬೆಳೆದ ಜೋಳದ ಸಂಗಟಿಯೇ ದೇವರಿಗೆ ಪ್ರಮುಖ ನೈವೇದ್ಯ. ಜಾತಿ-ಮತಗಳ ಬೇಲಿ ಮೀರಿ ನಾವೆಲ್ಲರೂ ಒಂದಾಗಿ ಊರು ಹಾಗೂ ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸುತ್ತೇವೆ.
– ಶರಣಪ್ಪ ಕುರಿ, ಗ್ರಾಮದ ಹಿರಿಯ



