ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಬಾಲ್ಯ ಹಸನಾಗಲು ಆಟ-ಪಾಠದೊಂದಿಗೆ ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಚಿಂತಕಿ ಜಯಶ್ರೀ ಉಗಲಾಟದ ಹೇಳಿದರು.
ನಗರದ ಗಂಗಿಮಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಕಮಹಾದೇವಿ ಕದಳಿಶ್ರೀ ಮಹಿಳಾ ವೇದಿಕೆಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ‘ಅಮೃತಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ವಿತರಿಸಿ ಅವರು ಮಾತನಾಡಿದರು.
ಬಾಲ್ಯದಲ್ಲಿಯೇ ಉತ್ತಮ ನಡೆ-ನುಡಿ ಹಾಗೂ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಶಾಲಾ ಪಾಠದೊಂದಿಗೆ ಜೀವನ ಪಾಠವೂ ಅಗತ್ಯವಾಗಿದೆ ಎಂದು ಹೇಳಿದರು.
ಚಿಂತಕ ರಮೇಶ ಶಿಗ್ಲಿ ಮಾತನಾಡಿ, ಸಂಗೀತದ ಮೂಲಕ ಕಲಿಕೆಯನ್ನು ಪರಿಣಾಮಕಾರಿಯಾಗಿಸಿಕೊಳ್ಳಬಹುದು. ಮಕ್ಕಳು ಶರಣರು ಹಾಗೂ ದಾರ್ಶನಿಕರ ಜೀವನ ಸಂದೇಶಗಳನ್ನು ತಿಳಿದು ಅನುಸರಿಸಬೇಕು ಎಂದರು.
ಚಿಂತಕಿ ಸುಜಾತಾ ಲಕ್ಷ್ಮೇಶ್ವರ ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿ ಅದನ್ನು ಸಾಧಿಸಲು ಹಿರಿಯರ ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಮುತ್ತಣ್ಣ ತೋಟಗೇರ ಅವರು ಪ್ರಯತ್ನ ಮತ್ತು ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು. ಸಾವಿತ್ರಿ ಶಿಗ್ಲಿ ಅವರು ಮಕ್ಕಳು ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕುಮಾರ ಯಶಸ್ಸಕುಮಾರ ಶಿಗ್ಲಿ ಅವರ ಜನ್ಮದಿನವನ್ನು ಮಕ್ಕಳೊಂದಿಗೆ ಆಚರಿಸಲಾಯಿತು.
ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್. ಬೆಳಹಾರ ಸ್ವಾಗತಿಸಿದರು. ಐ.ಡಿ. ಕಬ್ಬೇರಹಳ್ಳಿ ನಿರೂಪಿಸಿದರು. ಆರ್.ಡಿ. ಮಗಜಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಎಂ.ಟಿ. ವಡ್ಡಟ್ಟಿ, ಕವಯಿತ್ರಿ ಹಾಗೂ ಗಾಯಕಿ ಪದ್ಮಾ ಕಬಾಡಿ, ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.



