ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವರ್ಷಗಳಿಂದ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳನ್ನು ಮುಚ್ಚಿ, ಸಮಗ್ರ ಡಾಂಬರೀಕರಣ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡುತ್ತಿದ್ದರೂ ಸ್ಪಂದಿಸದ ಲೋಕೋಪಯೋಗಿ ಇಲಾಖೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸೆ.1ರಂದು ಲಕ್ಷ್ಮೇಶ್ವರಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಏಕಾಏಕಿ ರಸ್ತೆ ಗುಂಡಿಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ–ಲಕ್ಷ್ಮೇಶ್ವರ ಸಂಪರ್ಕಿಸುವ ಕೈಗಾ–ಇಳಕಲ್ ರಾಜ್ಯ ಹೆದ್ದಾರಿ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ನಿತ್ಯದ ಸಂಕಷ್ಟವಾಗಿದೆ. ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ನೀರು ಹಾಗೂ ಕೆಸರು ತುಂಬಿದರೆ, ಬಿಸಿಲಿನ ದಿನಗಳಲ್ಲಿ ಧೂಳುಮಯ ವಾತಾವರಣ ನಿರ್ಮಾಣವಾಗುತ್ತಿದೆ.
ರಸ್ತೆಯ ದುಸ್ಥಿತಿಯಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದ್ದು, ಕೆಲವರು ಮಾರ್ಗ ಬದಲಿಸಿ ಸುತ್ತುವರಿದು ಪ್ರಯಾಣಿಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಈ ಕುರಿತು ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿ, ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿಯೂ ರಸ್ತೆಯ ದುಸ್ಥಿತಿಯ ಕುರಿತು ಹಲವು ಬಾರಿ ವರದಿಗಳು ಪ್ರಕಟಗೊಂಡಿವೆ.
ಆದರೆ, ಇಷ್ಟೆಲ್ಲ ಮನವಿ, ಹೋರಾಟ ಮತ್ತು ಸಾರ್ವಜನಿಕರ ಗೋಳಿಗೂ ಜಗ್ಗದ ಅಧಿಕಾರಿಗಳು ಇದೀಗ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿರುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ರಸ್ತೆಯ ಸಮಗ್ರ ಅಭಿವೃದ್ಧಿಗೆ ಮಾಜಿ ಸಂಸದ ಶಿವಕುಮಾರ ಉದಾಸಿ ಅವರ ಎರಡು ಅವಧಿಯಲ್ಲಿಯೂ ಮನವಿ ಸಲ್ಲಿಸಲಾಗಿತ್ತು. ಬಳಿಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ಅವರಿಗೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಿಲ್ಲೆಯ ಪ್ರಭಾವಿ ಶಾಸಕ ಎಚ್.ಕೆ. ಪಾಟೀಲ ಹಾಗೂ ಈ ಹಿಂದೆ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದ ಸಿ.ಸಿ. ಪಾಟೀಲ ಜಿಲ್ಲೆಯವರಾಗಿದ್ದರೂ ರಸ್ತೆ ಅಭಿವೃದ್ಧಿಗೆ ನಿರೀಕ್ಷಿತ ಸ್ಪಂದನೆ ದೊರೆಯಲಿಲ್ಲ ಎಂಬ ಅಸಮಾಧಾನವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಲಕ್ಷ್ಮೇಶ್ವರಕ್ಕೆ ರಸ್ತೆ ಮಾರ್ಗದ ಮೂಲಕ ಆಗಮಿಸುವ ಬದಲು ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೂ ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಏಕಾಏಕಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಇಲಾಖೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅನುದಾನ ಇಲ್ಲ ಎಂದವರು ಈಗ ಯಾವ ಹಣದಲ್ಲಿ?
ರಸ್ತೆ ಅಭಿವೃದ್ಧಿಗೆ ಅನುದಾನ ಲಭ್ಯವಿಲ್ಲ. ಕ್ರಿಯಾಯೋಜನೆ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ಬಳಿಕ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಈವರೆಗೆ ಹೇಳುತ್ತಿದ್ದ ಅಧಿಕಾರಿಗಳು, ಇದೀಗ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಗೆ ಯಾವ ಅನುದಾನ ಬಳಸುತ್ತಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಶಿರಹಟ್ಟಿ ಮತಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಶಂಕರ ಬಾಳಿಕಾಯಿ ಪ್ರಶ್ನಿಸಿದ್ದಾರೆ.
ಕೇವಲ ಗುಂಡಿಗಳಿಗೆ ಜಲ್ಲಿಕಲ್ಲು ಹಾಕುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಬದಲಾಗಿ ವಾಹನ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗುವ ಸಾಧ್ಯತೆಯಿದೆ. ರಸ್ತೆಯುದ್ದಕ್ಕೂ ಮೊಣಕಾಲಿನಷ್ಟು ಆಳದ ಗುಂಡಿಗಳು ನಿರ್ಮಾಣವಾಗಿದ್ದು, ಈ ಹೆದ್ದಾರಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಗುಣಮಟ್ಟದ ಡಾಂಬರೀಕರಣ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಪ್ರಮುಖ ಆಗ್ರಹವಾಗಿದೆ.
ಜನರ ನಿತ್ಯದ ಸಂಚಾರಕ್ಕೆ ಅನುಕೂಲವಾಗುವಂತೆ ಕೈಗಾ–ಇಳಕಲ್ ರಾಜ್ಯ ಹೆದ್ದಾರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಕೇವಲ ಗಣ್ಯರ ಭೇಟಿ ಅಥವಾ ವಿಶೇಷ ಸಂದರ್ಭಗಳಲ್ಲಿ ತೇಪೆ ಹಾಕುವ ಕ್ರಮಕ್ಕೆ ಸೀಮಿತವಾಗದೆ, ರಸ್ತೆಯ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಹೆಲಿಪ್ಯಾಡ್ ಮೂಲಕ ಆಗಮಿಸುತ್ತಾರೆ ಎಂಬ ಕಾರಣಕ್ಕೆ ರಸ್ತೆಯ ಗುಂಡಿಗಳನ್ನು ಮುಚ್ಚಲು ತುರ್ತು ಕ್ರಮ ಕೈಗೊಳ್ಳುವ ಅಧಿಕಾರಿಗಳು, ಇದೇ ರಸ್ತೆಯಲ್ಲಿ ಹಲವು ವರ್ಷಗಳಿಂದ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಜನಸಾಮಾನ್ಯರ ಸಂಕಷ್ಟಕ್ಕೆ ಏಕೆ ಸ್ಪಂದಿಸಲಿಲ್ಲ? ಅನುದಾನ ಇಲ್ಲ ಎಂದಿದ್ದ ಅಧಿಕಾರಿಗಳು ಈಗ ಯಾವ ಹಣದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಜನರ ಕಷ್ಟಕ್ಕೆ ಸ್ಪಂದಿಸಿ ಕೈಗಾ–ಇಳಕಲ್ ರಾಜ್ಯ ಹೆದ್ದಾರಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಗುಣಮಟ್ಟದ ಡಾಂಬರೀಕರಣ ಕೈಗೊಳ್ಳಬೇಕು.
– ಶಂಕರ ಬಾಳಿಕಾಯಿ, ಶಿರಹಟ್ಟಿ ಮತಕ್ಷೇತ್ರ ಜೆಡಿಎಸ್ ಅಧ್ಯಕ್ಷ



