HomeKarnataka Newsದೊಡ್ಡಬಳ್ಳಾಪುರದಲ್ಲಿ ಘೋರ ದುರಂತ! ರೈಲು ಡಿಕ್ಕಿಗೆ ಅಜ್ಜಿ, ಇಬ್ಬರು ಮೊಮ್ಮಕ್ಕಳು ಬಲಿ

ದೊಡ್ಡಬಳ್ಳಾಪುರದಲ್ಲಿ ಘೋರ ದುರಂತ! ರೈಲು ಡಿಕ್ಕಿಗೆ ಅಜ್ಜಿ, ಇಬ್ಬರು ಮೊಮ್ಮಕ್ಕಳು ಬಲಿ

For Dai;y Updates Join Our whatsapp Group

ದೇವನಹಳ್ಳಿ: ರೈಲು ಹಳಿ ದಾಟುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ವೃದ್ಧೆ ಸೇರಿದಂತೆ ಇಬ್ಬರು ಮೊಮ್ಮಕ್ಕಳು ಮೃತಪಟ್ಟಿರುವ ಕರುಣಾಜನಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಮೃತರನ್ನು ಮುತ್ತೂರು ನಿವಾಸಿ ಇರ್ಫಾನಾ (46) ಹಾಗೂ ಆಂಧ್ರಪ್ರದೇಶದ ಹಿಂದೂಪುರದ ರುಕಿಯಾ (13), ರಾಕಿಯಾ (8) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ರುಕಿಯಾ ಮತ್ತು ರಾಕಿಯಾ ಕಳೆದ ಶನಿವಾರ ರಜೆ ಕಳೆಯಲು ಹಿಂದೂಪುರದಿಂದ ದೊಡ್ಡಬಳ್ಳಾಪುರದಲ್ಲಿರುವ ಅಜ್ಜಿ ಇರ್ಫಾನಾ ಅವರ ಮನೆಗೆ ಬಂದಿದ್ದರು. ಸೋಮವಾರ ಬೆಳಗ್ಗೆ ಶಾಲೆಗೆ ತೆರಳಬೇಕಿದ್ದ ಹಿನ್ನೆಲೆಯಲ್ಲಿ ಮಕ್ಕಳನ್ನು ಸಮಯಕ್ಕೆ ಕಳುಹಿಸುವಂತೆ ಪೋಷಕರು ತಿಳಿಸಿದ್ದರು.

ಇದಕ್ಕಾಗಿ ಇರ್ಫಾನಾ ಸೋಮವಾರ ಬೆಳಗಿನ ಜಾವ ಮಕ್ಕಳನ್ನು ಎಬ್ಬಿಸಿ, ಬೆಳಗ್ಗೆ 6 ಗಂಟೆಗೆ ಹೊರಡುವ ಹಿಂದೂಪುರ ಪ್ಯಾಸೆಂಜರ್ ರೈಲು ಹಿಡಿಯಲು ಇಬ್ಬರನ್ನೂ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದರು.

ಗೂಡ್ಸ್ ರೈಲು ಪಕ್ಕದಲ್ಲಿ ಹಳಿ ದಾಟುವಾಗ ದುರಂತ:

ಪ್ಯಾಸೆಂಜರ್ ರೈಲು ತಪ್ಪಿಹೋಗಬಾರದು ಎಂಬ ಆತುರದಲ್ಲಿ ಟಿಕೆಟ್ ಪಡೆಯಲು ಮುಂದಾಗಿದ್ದ ಅಜ್ಜಿ ಮತ್ತು ಇಬ್ಬರು ಮಕ್ಕಳು ನಿಂತಿದ್ದ ಗೂಡ್ಸ್ ರೈಲಿನ ಪಕ್ಕದಲ್ಲೇ ಹಳಿ ದಾಟಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಅದೇ ಮಾರ್ಗದಲ್ಲಿ ಬಂದ ಎಕ್ಸ್‌ಪ್ರೆಸ್ ರೈಲು ಮೂವರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಕೈವಾಕ್ ನಿರ್ಮಾಣಕ್ಕೆ ಸ್ಥಳೀಯರ ಒತ್ತಾಯ:

ರೈಲ್ವೆ ನಿಲ್ದಾಣದ ಸಮೀಪ ಸ್ಕೈವಾಕ್ ಅಥವಾ ಸುರಕ್ಷಿತ ಪಾದಚಾರಿ ಮೇಲ್ಸೇತುವೆ ಇಲ್ಲದಿರುವುದರಿಂದ ಸಾರ್ವಜನಿಕರು ಹಳಿ ದಾಟುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರೈಲ್ವೆ ನಿಲ್ದಾಣದ ಸಮೀಪವೇ ಕೈಗಾರಿಕಾ ಪ್ರದೇಶವೂ ಇರುವುದರಿಂದ ರಾತ್ರಿ ಹಾಗೂ ಬೆಳಗಿನ ವೇಳೆ ಕೆಲಸಕ್ಕೆ ತೆರಳುವವರು ಮತ್ತು ವಾಪಸ್ ಬರುವವರು ಅಪಾಯದ ನಡುವೆಯೇ ಹಳಿ ದಾಟುತ್ತಿದ್ದಾರೆ ಎನ್ನಲಾಗಿದೆ.

ಇಂತಹ ಘಟನೆಗಳು ಮರುಕಳಿಸದಂತೆ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ ಬಳಿ ಸ್ಕೈವಾಕ್ ನಿರ್ಮಿಸಬೇಕು. ಸಾರ್ವಜನಿಕರ ಸುರಕ್ಷತೆಗೆ ರೈಲ್ವೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮಕ್ಕಳನ್ನು ಶಾಲೆಗೆ ಸಮಯಕ್ಕೆ ಕಳುಹಿಸುವ ಉದ್ದೇಶದಿಂದ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದ ಅಜ್ಜಿ, ಇಬ್ಬರು ಮೊಮ್ಮಕ್ಕಳೊಂದಿಗೆ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ. ಘಟನೆ ಕುರಿತು ಯಶವಂತಪುರ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img