ರಾಯಚೂರು: ಕಲಿಯುಗ ಕಾಮಧೇನು ಎಂದೇ ಭಕ್ತರಿಂದ ಆರಾಧಿಸಲ್ಪಡುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ಕಾಣಿಕೆಗಳ ಮಹಾಪೂರ ಹರಿದು ಬಂದಿದೆ.
ಜೂನ್ ತಿಂಗಳ 21 ದಿನಗಳ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು ₹3.72 ಕೋಟಿ ಕಾಣಿಕೆ ಸಂಗ್ರಹವಾಗಿದೆ.
ಮಠದ ಮಾಹಿತಿಯ ಪ್ರಕಾರ, ಸಂಗ್ರಹವಾದ ಕಾಣಿಕೆಯಲ್ಲಿ ₹3,61,40,030 ಮೌಲ್ಯದ ಕರೆನ್ಸಿ ನೋಟುಗಳು ಹಾಗೂ ₹11,02,500 ಮೌಲ್ಯದ ನಾಣ್ಯಗಳು ಸೇರಿವೆ. ಇದಲ್ಲದೆ ಭಕ್ತರು ಕಾಣಿಕೆ ರೂಪದಲ್ಲಿ 67 ಗ್ರಾಂ ಚಿನ್ನ ಮತ್ತು 511 ಗ್ರಾಂ ಬೆಳ್ಳಿಯನ್ನು ಸಮರ್ಪಿಸಿದ್ದಾರೆ.
ಪ್ರತಿ ತಿಂಗಳಿನಂತೆ ಈ ಬಾರಿಯೂ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ತಮ್ಮ ಭಕ್ತಿಯನ್ನು ಕಾಣಿಕೆ ಮೂಲಕ ಅರ್ಪಿಸಿದ್ದಾರೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಕರಸೇವಕರು ಹಾಗೂ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಹಾಗೂ ಮಠದ ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ ಯಶಸ್ವಿಯಾಗಿ ನಡೆಯಿತು.



