ವಿಜಯಸಾಕ್ಷಿ ಸುದ್ದಿ, ಗದಗ : ಮುಳಗುಂದ ರಸ್ತೆ (ಆಚಾರ್ಯ ಆಸ್ಪತ್ರೆ ಹಿಂದೆ) ಪ್ರದೇಶದ ನಿವಾಸಿ, ಗಣ್ಯ ವ್ಯಾಪಾರಸ್ಥರಾಗಿದ್ದ ಶತಾಯಿಷಿ ರುದ್ರಪ್ಪ ರೇವಣಪ್ಪ ಪಟ್ಟಣಶೆಟ್ಟಿ (104 ವರ್ಷ) ಆಗಸ್ಟ್ 1ರಂದು ನಿಧನರಾದರು. ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದರು.
ರುದ್ರಪ್ಪ ರೇವಣಪ್ಪ ಪಟ್ಟಣಶೆಟ್ಟಿಯವರ ಕುಟುಂಬದವರು, ಅವರ ಕಣ್ಣು ಮತ್ತು ದೇಹವನ್ನು ದಾನ ಮಾಡಬೇಕೆಂಬ ಆಸೆಯಿಂದ ದೇಹದಾನಕ್ಕಾಗಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ದೇಹದಾನ ಸಂಘ, ಅಂಗರಚನಾ ಶಾಸ್ತ್ರ ವಿಭಾಗವನ್ನು ಸಂಪರ್ಕಿಸಿದರು. ಮೃತರ ಕಣ್ಣುಗಳನ್ನು ಹುಬ್ಬಳ್ಳಿಯ ಡಾ. ಎಂ.ಎಂ. ಜೋಷಿ ನೇತ್ರಾಲಯಕ್ಕೆ ದಾನ ಮಾಡಿದ ನಂತರ, ಪಟ್ಟಣಶೆಟ್ಟಿ ಕುಟುಂಬದವರು ತಮ್ಮ ತಂದೆಯ ದೇಹವನ್ನು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾನ ಮಾಡಿ ಮಾದರಿಯಾಗಿದ್ದಾರೆ.
ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಉದ್ದೇಶಕ್ಕಾಗಿ ತಮ್ಮ ತಂದೆಯ ದೇಹವನ್ನು ದಾನ ಮಾಡಿ ಸಮಾಜಕ್ಕೆ ಮಾದರಿಯಾದ ಕುಟುಂಬದ ಸದಸ್ಯರಿಗೆ ನಿರ್ದೇಶಕರಾದ ಡಾ. ಬಸವರಾಜ ಬೊಮ್ಮನಹಳ್ಳಿ, ಪ್ರಾಂಶುಪಾಲರಾದ ಡಾ. ರಾಜು ಜಿ.ಎಮ್, ವೈದ್ಯಕೀಯ ಅಧೀಕ್ಷಕರಾದ ಡಾ. ರೇಖಾ ಸೊನಾವಾನೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ್ ಹಾಗೂ ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಎಸ್. ಭೂಸರಡ್ಡಿಯವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಸಮಾಜವು ಈ ಉದಾಹರಣೆಯನ್ನು ಅನುಸರಿಸಿ, ದೇಹವನ್ನು ಮಣ್ಣು ಮಾಡದೇ, ಸುಡದೇ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಉದಾತ್ತ ಉದ್ದೇಶಕ್ಕಾಗಿ ದಾನ ಮಾಡಲು ಮುಂದಾಗಬೇಕೆಂದು ದೇಹದಾನ ಸಂಘ, ಅಂಗರಚನಾಶಾಸ್ತ್ರ ವಿಭಾಗ, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾರ್ಯದರ್ಶಿಯಾದ ಡಾ. ಪ್ರತೀಕ ಖೋನಾ ಮನವಿ ಮಾಡಿದ್ದಾರೆ.



