HomeGadag Newsಗ್ರಾಮದ ನಿವಾಸಿಗಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ

ಗ್ರಾಮದ ನಿವಾಸಿಗಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನರಗುಂದ ತಾಲೂಕಿನ ಪ್ರವಾಹಪೀಡಿತ ಕೊಣ್ಣೂರ, ಲಕಮಾಪುರ, ವಾಸನ ಗ್ರಾಮಗಳಿಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಶನಿವಾರ ಭೇಟಿ ನೀಡಿ ಪರಿಸ್ಥಿತಿಯ ಕುರಿತು ಅವಲೋಕನ ನಡೆಸಿದರು.

ಕೊಣ್ಣೂರು ಗ್ರಾಮದ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಮಳೆಯಿಂದ ಅಲ್ಲಲ್ಲಿ ಸಮಸ್ಯೆ ಆಗಿದೆ.

ಖಾನಾಪೂರ ಭಾಗದಲ್ಲಿ ಹೆಚ್ಚಿನ ಮಳೆ ಆಗಿದ್ದರಿಂದ ಮಲಪ್ರಭಾ ನದಿಗೆ ಹೆಚ್ಚು ನೀರು ಹರಿದು ಬಂದಿದೆ. ಡ್ಯಾಂ ಭರ್ತಿ ಆಗಲು ಕೇವಲ 2ರಿಂದ 3 ಅಡಿ ಮಾತ್ರ ಬಾಕಿ ಇದೆ. ಸದ್ಯ 8-10 ಮನೆಗಳಿಗೆ ನೀರು ನುಗ್ಗಿದೆ. ಸುದೈವದಿಂದ ಇದುವರೆಗೆ ಯಾವುದೇ ವಿಧದ ತೀವ್ರ ಹಾನಿಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಹಾನಿ ಪ್ರದೇಶದ ಗ್ರಾಮಸ್ಥರ ಜೊತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದ್ದು, ವಾಸ್ತವ ಸ್ಥಿತಿಯನ್ನು ಅರಿಯಲಿದೆ ಎಂದರು.

Minister H.K. Patil visit

ನಂತರ ಸಚಿವ ಎಚ್.ಕೆ. ಪಾಟೀಲರು ಲಖಮಾಪೂರ, ವಾಸನ ಗ್ರಾಮದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಲಖಮಾಪೂರ ಗ್ರಾಮದ ಕೆಲವು ಮನೆಗಳಿಗೆ ಈಗಾಗಲೇ ನೀರು ನುಗ್ಗಿದ್ದು, ಮನೆ ಹಾನಿಯಾದ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಗ್ರಾಮದ ನಿವಾಸಿಗಳಿಗೆ ಶಾಶ್ವತ ಪರಿಹಾರ ಒದಗಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಲಕಮಾಪುರದ ಜಲಾವೃತವಾದ ಮನೆಯ ಕುಟುಂಬಸ್ಥರಿಗೆ ಅಗತ್ಯ ದಿನಸಿ ಕಿಟ್‌ಗಳನ್ನು ಸಚಿವ ಡಾ. ಎಚ್.ಕೆ. ಪಾಟೀಲ ಇದೇ ಸಂದರ್ಭದಲ್ಲಿ ವಿತರಿಸಿದರು. ವಾಸನದಲ್ಲಿ ಇರುವ 550 ಖಾತೆದಾರರ ಪೈಕಿ 350 ಖಾತೆದಾರರಿಗೆ ಬೆಳೆ ವಿಮೆ ಹಾಗೂ ಪರಿಹಾರ ಬಂದಿದ್ದು, ಸರಿಯಾಗಿ ಸಮೀಕ್ಷೆ ಪರಿಹಾರ ವಿತರಣೆ ಆಗಿಲ್ಲ ಎಂದು ಗ್ರಾಮದ ರೈತರು ಸಚಿವರಲ್ಲಿ ತಮ್ಮ ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೂಡಲೇ ಸಮಸ್ಯೆಗೆ ಪರಿಹಾರ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

Minister H.K. Patil visit

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಆರ್. ಯಾವಗಲ್, ಜಿ.ಪಂ ಮಾಜಿ ಅಧ್ಯಕ್ಷರಾದ ರಾಜುಗೌಡ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಉಪವಿಭಾಗಾಧಿಕಾರಿ ಗಂಗಪ್ಪ ಎಂ ಸೇರಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಮಲಪ್ರಭಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದೆ. ಇದರಿಂದ ಪದೇ ಪದೇ ಈ ಭಾಗದ ಜನರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಾರೆ. ರಾಜ್ಯ ಸರ್ಕಾರ ಮಲಪ್ರಭಾ ನದಿಯಲ್ಲಿನ ಹೂಳು ಎತ್ತುವ ಪ್ರಯತ್ನ ಹಾಗೂ ಅಗಲೀಕರಕರಣಕ್ಕೆ ಕ್ರಮ ಕೈಗೊಳ್ಳಲಿದೆ. ನದಿ ತೀರದಲ್ಲಿ ಅವಘಡ ಸಂಭವಿಸುವ ಮುನ್ನ ಮುಂಜಾಗ್ರತಾ ಕ್ರಮವನ್ನು ನಮ್ಮ ಸರ್ಕಾರ ಕೈಗೊಳ್ಳುತ್ತಿದೆ.
– ಡಾ. ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು, ಗದಗ.

ಜಿಲ್ಲೆಯ ನರಗುಂದ ತಾಲೂಕಿನ ಕೋಣ್ಣೂರ ಗ್ರಾಮದ ಜಮೀನುಗಳಿಗೆ ಮಲಪ್ರಭಾ ನದಿ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಸುಮಾರು 4-5 ವರ್ಷಗಳಿಂದ ಬೆಳೆಸಿದ ಪೇರಲ ಹಣ್ಣಿನ ಗಿಡಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಜೊತೆಗೆ, ತೆಂಗು, ಗೋವಿನ ಜೋಳ, ಕಬ್ಬು ಸೇರಿದಂತೆ ಹಲವು ಬೆಳೆಗಳು ಮಲಪ್ರಭಾ ನದಿಯ ಪಾಲಾಗಿವೆ ಎಂದು ಕೊಣ್ಣೂರು ಗ್ರಾಮಸ್ಥರು ತಮ್ಮ ಅಹವಾಲನ್ನು ಸಚಿವರಲ್ಲಿ ತೋಡಿಕೊಂಡರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img