ಹೈದರಾಬಾದ್: ಹೊರ ವರ್ತುಲ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತೆಲುಗು ನಟ ಭರತ್ ಕಾಂತ್ ಮತ್ತು ಅವರ ಸ್ನೇಹಿತ ಸಾಯಿ ತ್ರಿಲೋಕ್ ಮೃತಪಟ್ಟ ಘಟನೆ ಆದಿಬಟ್ಲಾ ಬಳಿ ನಡೆದಿದೆ.
ಭರತ್ ಕಾಂತ್ ಕಾರು ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಲಾರಿಯ ಹಿಂದಿನ ಚಕ್ರಗಳೂ ಕಳಚಿ ಬಿದ್ದಿದ್ದು, ಘಟನೆ ಸ್ಥಳದಲ್ಲಿ ಭೀಕರ ದೃಶ್ಯ ನಿರ್ಮಾಣವಾಗಿತ್ತು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಆರಂಭಿಸಿದ್ದಾರೆ.
31 ವರ್ಷದ ಭರತ್ ಕಾಂತ್ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯ ಡಿಜಿಟಲ್ ಕ್ರಿಯೇಟರ್ ಆಗಿದ್ದರು. ಜೊತೆಗೆ ತೆಲುಗು ಸಿನಿಮಾಗಳು ಮತ್ತು ‘ಟೆನೆಂಟ್’, ‘ಗ್ರಾಮಮ್’ ಸೇರಿದಂತೆ ಕಿರುಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದರು.



