ನವದೆಹಲಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿವಾದದಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದ್ದು, ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರಿಗೆ ಮತ್ತೆ ಶಾಸಕ ಸ್ಥಾನ ಉಳಿದಿದೆ.
ಅಂಚೆ ಮತಗಳ ಮರು ಎಣಿಕೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜೇಗೌಡ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.
ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆಲುವು ಸಾಧಿಸಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಸುಪ್ರೀಂಕೋರ್ಟ್ ಆದೇಶದಿಂದ ಅವರಿಗೆ ತಾತ್ಕಾಲಿಕ ಹಿನ್ನಡೆ ಉಂಟಾಗಿದೆ.
ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂಕೋರ್ಟ್, ಮರು ಎಣಿಕೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ನಿಗದಿ ಮಾಡಿದೆ.
ಈ ಆದೇಶದೊಂದಿಗೆ ಕಾಂಗ್ರೆಸ್ ಶಿಬಿರದಲ್ಲಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ ಕ್ಷೇತ್ರದ ರಾಜಕೀಯ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.



