ಬೆಂಗಳೂರು: ನಗರದ ಹೊಸಪಾಳ್ಯ ಪ್ರದೇಶದಲ್ಲಿರುವ ಬಾಯ್ಸ್ ಪಿಜಿಯೊಂದರಲ್ಲಿ ತಡರಾತ್ರಿ ನುಗ್ಗಿದ ಕಳ್ಳರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಚಾರ್ಜಿಂಗ್ಗೆ ಇಟ್ಟಿದ್ದ ಎಂಟು ದುಬಾರಿ ಮೊಬೈಲ್ ಫೋನ್ಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಹೊಸಪಾಳ್ಯದ ಕೂಡ್ಲು ಮುಖ್ಯರಸ್ತೆಯಲ್ಲಿರುವ ‘ಸಾಯಿ ಆರಾಧ್ಯ ಲಕ್ಸುರಿ ಪಿಜಿ ಫಾರ್ ಜೆಂಟ್ಸ್’ನಲ್ಲಿ ಈ ಕಳ್ಳತನ ನಡೆದಿದ್ದು, ಪಿಜಿಯಲ್ಲಿ ವಾಸವಾಗಿರುವ 27 ವರ್ಷದ ಕ್ಯಾಬ್ ಚಾಲಕ ದರ್ಶನ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, ಮೇ 28ರಂದು ರಾತ್ರಿ ಕೆಲಸ ಮುಗಿಸಿ ಪಿಜಿಗೆ ಬಂದಿದ್ದ ದರ್ಶನ್ ತಮ್ಮ ಎರಡು ಮೊಬೈಲ್ ಫೋನ್ಗಳನ್ನು ಚಾರ್ಜಿಂಗ್ಗೆ ಇಟ್ಟು ಮಲಗಿದ್ದರು. ಅವರೊಂದಿಗೆ ಕೊಠಡಿಯಲ್ಲಿ ವಾಸವಾಗಿದ್ದ ಸ್ನೇಹಿತರು ಹಾಗೂ ಪಕ್ಕದ ಕೊಠಡಿಯಲ್ಲಿದ್ದ ನಿವಾಸಿಗಳೂ ಸಹ ತಮ್ಮ ಮೊಬೈಲ್ಗಳನ್ನು ಚಾರ್ಜ್ಗೆ ಇಟ್ಟಿದ್ದರು.
ಆದರೆ ಮೇ 29ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಎದ್ದು ನೋಡಿದಾಗ ದರ್ಶನ್ ಅವರ ಮೊಬೈಲ್ಗಳು ಕಾಣೆಯಾಗಿದ್ದವು. ಬಳಿಕ ಇತರ ಕೊಠಡಿಗಳಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು ಎಂಟು ಮೊಬೈಲ್ ಫೋನ್ಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಜಿಯಲ್ಲಿ ಯಾವುದೇ ಭದ್ರತಾ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್) ಇರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಇದಲ್ಲದೆ, ಪಿಜಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ಕಳ್ಳರು ಮಧ್ಯರಾತ್ರಿ ವೇಳೆ ಕಟ್ಟಡದೊಳಗೆ ನುಗ್ಗಿ, ಕೊಠಡಿಗಳಿಂದ ಮೊಬೈಲ್ ಫೋನ್ಗಳನ್ನು ಕಳವು ಮಾಡಿ ಪರಾರಿಯಾಗಿರುವುದು ದಾಖಲಾಗಿದೆ.
ಪಿಜಿ ನಿವಾಸಿಗಳು ರಾತ್ರಿ ವೇಳೆ ತಮ್ಮ ಕೊಠಡಿಗಳ ಬಾಗಿಲುಗಳನ್ನು ಲಾಕ್ ಮಾಡದೇ ಮಲಗಿದ್ದ ಕಾರಣ ಕಳ್ಳರಿಗೆ ಸುಲಭವಾಗಿ ಕೃತ್ಯ ಎಸಗಲು ಅವಕಾಶ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದ್ದು, ಕಳ್ಳರ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.



