ಶಿವಮೊಗ್ಗ: ತನ್ನದೇ ಲೈಸೆನ್ಸ್ ಹೊಂದಿದ್ದ ಗನ್‌ನಿಂದ ಗುಂಡು ಹಾರಿಸಿಕೊಂಡು ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಗ್ರಾಮದಲ್ಲಿ ನಡೆದಿದೆ.
ತಟ್ಟೆಕೊಡ್ಲು ನಿವಾಸಿ ರಾಮಚಂದ್ರ ರಾವ್ (85) ಆತ್ಮಹತ್ಯೆ ಮಾಡಿಕೊಂಡವರು. ಅವರು ತಮ್ಮ ಮನೆಯ ಕೋಣೆಯಲ್ಲೇ ಗನ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದು, ಘಟನೆಯ ತೀವ್ರತೆಗೆ ತಲೆ ಸಂಪೂರ್ಣ ಛಿದ್ರಗೊಂಡಿದೆ. ಮನೆಯ ಗೋಡೆಗಳ ಮೇಲೂ ರಕ್ತದ ಕಲೆಗಳು ಕಂಡುಬಂದಿವೆ.
ಮೂರು ದಿನಗಳ ಹಿಂದೆ ರಾಮಚಂದ್ರ ರಾವ್ ಅವರು ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ನೋವು ಕಡಿಮೆಯಾಗಿರಲಿಲ್ಲ ಎನ್ನಲಾಗಿದೆ. ಇದೇ ಕಾರಣದಿಂದ ತೀವ್ರ ನೋವು ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಗುಂಡಿನ ಸದ್ದು ಕೇಳಿ ಮನೆಯವರು ಸ್ಥಳಕ್ಕೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳಗ್ಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವೂ ಸ್ಥಳ ಪರಿಶೀಲನೆ ನಡೆಸಿದೆ.
ಬಳಸಿದ ಗನ್‌ಗೆ ಮಾನ್ಯ ಪರವಾನಗಿ ಇತ್ತೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



