ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕ್ರೀಡೆ ಮತ್ತು ದೇಶಸೇವೆಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ಯುವ ಪ್ರತಿಭೆಗಳಿಗೆ ಸಮೀಪದ ಜಕ್ಕಲಿ ಗ್ರಾಮದಲ್ಲಿ ಭವ್ಯ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಶ್ರೀ ಮಹಾಂತೇಶ್ವರ ಯುವಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಟ್ಯಾ-ಪಟ್ಯಾ ಕ್ರೀಡೆಯಲ್ಲಿ ಭಾರತ ಮಹಿಳಾ ತಂಡಕ್ಕೆ ಆಯ್ಕೆಯಾಗಿರುವ ಪ್ರೀತಿ ಸುಭಾಷ್ ಬುಳ್ಳಾ ಹಾಗೂ ಅಗ್ನಿವೀರ ಸೇನಾ ಪಡೆಗೆ ಆಯ್ಕೆಯಾಗಿರುವ ಪ್ರಜ್ವಲ್ ಕೋರಿ ಮತ್ತು ಶಂಕ್ರಪ್ಪ ಇಟಗಿ ಅವರನ್ನು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರೋಣ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುತ್ತು ಕಡಗದ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರು ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ದೃಢ ಸಂಕಲ್ಪದ ಮೂಲಕ ರಾಷ್ಟ್ರೀಯ ಮತ್ತು ದೇಶಸೇವೆಯ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಪ್ರೀತಿ ಬುಳ್ಳಾ ಅವರು ಅಟ್ಯಾ-ಪಟ್ಯಾ ಕ್ರೀಡೆಯಲ್ಲಿ ಭಾರತ ಮಹಿಳಾ ತಂಡಕ್ಕೆ ಆಯ್ಕೆಯಾಗಿರುವುದು ಗ್ರಾಮದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ಇತರ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.
ಅದೇ ರೀತಿ ಅಗ್ನಿವೀರ ಸೇನಾ ಪಡೆಗೆ ಆಯ್ಕೆಯಾಗಿರುವ ಪ್ರಜ್ವಲ್ ಕೋರಿ ಮತ್ತು ಶಂಕ್ರಪ್ಪ ಇಟಗಿ ದೇಶಸೇವೆಯ ಮಹತ್ವದ ಹಾದಿಯಲ್ಲಿ ಹೆಜ್ಜೆ ಇಟ್ಟಿರುವುದು ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಇನ್ನೋರ್ವ ಅತಿಥಿ ಪ್ರಕಾಶ ವಾಲಿ ಮಾತನಾಡಿ, ಸ್ಪಷ್ಟ ಗುರಿ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು. ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ಮನೋಭಾವ ಯುವಕರಲ್ಲಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ಯುವ ಸಾಧಕರು ಮಾತನಾಡಿ, ತಮ್ಮ ಸಾಧನೆಗೆ ಕುಟುಂಬ ಸದಸ್ಯರು, ಶಿಕ್ಷಕರು ಹಾಗೂ ಗ್ರಾಮಸ್ಥರ ಪ್ರೋತ್ಸಾಹವೇ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಗ್ರಾಮದ ಹೆಸರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳಗಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಚನ್ನಬಸು ಕೊಪ್ಪದ, ಜಗದೀಶ್ ಪಲ್ಲೇದ, ಮಹಾಂತೇಶ್ ಇಟಗಿ, ನಾಗರಾಜ್ ಕಡಗದ, ಅಶೋಕ ವಾಲಿ, ಶರಣಪ್ಪ ಕೋರಿ, ಆದಾಮಸಾಬ್ ಬಾಲೇಸಾಬನವರ, ಮಹಾಂತೇಶ ಆನೆಹೊಸೂರು, ಸುಭಾಷ್ ಬುಳ್ಳಾ, ಗುರುಪಾದ ವಾಲಿ, ಮಂಜು ಪಲ್ಲೇದ, ಪ್ರವೀಣ್ ವಾಲಿ, ಆನಂದ್ ಕೊಪ್ಪದ, ವಿವೇಕಾನಂದ ಗುಬ್ಬೇನಕೊಪ್ಪ, ಕಂಠಯ್ಯ ರೇಣುಕಮಠ, ಅರುಣ ಬೂದಿಹಾಳ, ಶಿವು ಬಳಗೇರ ಸೇರಿದಂತೆ ಗ್ರಾಮಸ್ಥರು, ಯುವಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿವಕುಮಾರ್ ಸ್ಟಾಂಪಿನ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಸೋಮನಕಟ್ಟಿ ವಂದಿಸಿದರು.
“ಗ್ರಾಮೀಣ ಭಾಗದ ಯುವಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಸಾಧಕರು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು.”
– ಮುತ್ತು ಕಡಗದ, ಮಾಜಿ ಅಧ್ಯಕ್ಷರು, ಬಿಜೆಪಿ ಮಂಡಲ, ರೋಣ



