ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಸುಮಾರು 42 ಹಿಂದುಳಿದ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಸ್ಥಾಪನೆಯಾಗಿರುವ ಗದಗ ಜಿಲ್ಲಾ ಹಿಂದುಳಿದ ಸಮುದಾಯಗಳ ಮಹಾಮಂಡಳ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ಸಮಾಜದ ಯುವಜನರನ್ನು ಮುಖ್ಯವಾಹಿನಿಗೆ ತಂದು ಸ್ವಾವಲಂಬಿಗಳನ್ನಾಗಿಸುವ ಗುರಿಯೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ, ವಸತಿ ಸೌಲಭ್ಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಜಿಲ್ಲೆಯ ಕುರುಬ, ಕುರುಹಿನಶೆಟ್ಟಿ, ಗಾಣಿಗ, ದೇವಾಂಗ, ಸ್ವಕುಳಸಾಳಿ, ಪದ್ಮಶಾಲಿ, ವಿಶ್ವಕರ್ಮ, ಗೊಲ್ಲ, ಸಾದರು, ಹಡಪದ, ಶಿಂಪಿಗ, ಕುಂಬಾರ, ಮಡಿವಾಳ, ಗೌಳಿ, ಎಸ್‌ಎಸ್‌ಕೆ, ಅಂಬಿಗ, ತೊಗಟಿವೀರ, ಪಟ್ಟಿಸಾಲಿ, ಕಲಾಲ, ರಜಪೂತ, ದೈವಜ್ಞ, ಕಾಟಿಕ ಉಪ್ಪಾರ ಸೇರಿದಂತೆ 42 ಹಿಂದುಳಿದ ಸಮುದಾಯಗಳ ಮುಖಂಡರು 2023ರಿಂದ ನಿರಂತರ ಸಭೆಗಳನ್ನು ನಡೆಸಿ ಸಂಘಟನೆಯೊಂದನ್ನು ರೂಪಿಸಲು ಮುಂದಾಗಿದ್ದರು.
ಈ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಮಹಾಮಂಡಳದ ಉಪಾಧ್ಯಕ್ಷರು ಹಾಗೂ ಗಾಣಿಗ ಸಮಾಜದ ಅಧ್ಯಕ್ಷರಾದ ಬಸವರಾಜ ಬಿಂಗಿ ಅವರು ತಮ್ಮ ಸ್ವಂತ 20 ಗುಂಟೆ ಜಮೀನನ್ನು ದಾನವಾಗಿ ನೀಡಿರುವುದು ಸಂಘಟನೆಯ ಅಭಿವೃದ್ಧಿಗೆ ಬಲ ತುಂಬಿದೆ. ದಾನವಾಗಿ ನೀಡಲಾದ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಬಿನ್‌ಶೆತ್ತಿ ಮಾಡಿಸಲಾಗಿದ್ದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ನಿವೇಶನ ವಿನ್ಯಾಸಕ್ಕೂ ಅನುಮೋದನೆ ದೊರೆತಿದೆ.
ಸದರ ಜಾಗೆಯಲ್ಲಿ ಹಿಂದುಳಿದ ಸಮುದಾಯಗಳ ಯುವಕ-ಯುವತಿಯರಿಗೆ ವೃತ್ತಿ ಕೌಶಲ್ಯಾಭಿವೃದ್ಧಿ ತರಬೇತಿ, ವಸತಿ ಸಹಿತ ತರಬೇತಿ ವ್ಯವಸ್ಥೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗುತ್ತಿದೆ. ವಿವಿಧ ಸಮಾಜಗಳು ಹಾಗೂ ದಾನಿಗಳ ಸಹಕಾರದಿಂದ ನಿಧಿ ಸಂಗ್ರಹಿಸಿ ಶೀಘ್ರದಲ್ಲೇ ಭೂಮಿಪೂಜೆ ಹಾಗೂ ಬೃಹತ್ ಸಮುದಾಯ ಸಮಾವೇಶ ಆಯೋಜಿಸಲು ಮಹಾಮಂಡಳ ನಿರ್ಧರಿಸಿದೆ.
ಈ ಯೋಜನೆಗಳಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಭಾನುವಾರ ನಾಮಫಲಕ ಅನಾವರಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮಹಾಮಂಡಳದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಮಾತನಾಡಿ, ಸಂಘಟನೆಯ ಸ್ಥಾಪನೆ, ಉದ್ದೇಶಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಾಜೇಂದ್ರ ಕಡ್ಲಿಕೊಪ್ಪ, ಬಸವರಾಜ ಬಿಂಗಿ, ಬಿ.ಜಿ. ಕೊಳ್ಳಿ, ಕಾರ್ಯದರ್ಶಿ ರುದ್ರಣ್ಣ ಗುಳಗುಳಿ, ಹರೀಶ ಪೂಜಾರ, ಸುರೇಶ ಕುಂಬಾರ, ಅರವಿಂದ ಹುಲ್ಲೂರ, ಅನಿಲ ಗಡ್ಡಿ, ಶ್ರೀಕಾಂತ ಖಟವಟೆ, ಕೃಷ್ಣಾ ಹಡಪದ, ಕೋಶಾಧ್ಯಕ್ಷ ಪ್ರಕಾಶ ಬೊಮ್ಮನಹಳ್ಳಿ, ರಾಮಕೃಷ್ಣ ಪಾಂಡ್ರೆ ಸೇರಿದಂತೆ ವಿವಿಧ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು.
“ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹೊಸ ಅಧ್ಯಾಯ”
ಗದಗ ಜಿಲ್ಲಾ ಹಿಂದುಳಿದ ಸಮುದಾಯಗಳ ಮಹಾಮಂಡಳದ ಈ ಯೋಜನೆಗಳು ಯಶಸ್ವಿಯಾದರೆ, ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೊಸ ವೇದಿಕೆ ನಿರ್ಮಾಣವಾಗಲಿದ್ದು, ವಿವಿಧ ಸಮುದಾಯಗಳನ್ನು ಒಂದೇ ಸೂರಿನಡಿ ತರುವ ಮಹತ್ವದ ಪ್ರಯತ್ನವಾಗಿ ಗುರುತಿಸಿಕೊಳ್ಳಲಿದೆ.



