ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದೆ ನೀರಾವರಿ ಬೆಳೆಗಳು ಒಣಗುತ್ತಿವೆ ಎಂದು ಆರೋಪಿಸಿ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಗುರುವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಕಚೇರಿಗೆ ಬೀಗ ಜಡಿದು ತೀವ್ರ ಪ್ರತಿಭಟನೆ ನಡೆಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ರೈತರು, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.
ಮಳೆಯ ಕೊರತೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ನೀರಾವರಿಯೇ ಆಸರೆಯಾಗಿದ್ದು, ಹಗಲಿನಲ್ಲಿ ಐದು ಗಂಟೆ ವಿದ್ಯುತ್ ನೀಡುವುದಾಗಿ ಹೇಳಿದರೂ ಮಧ್ಯದಲ್ಲೇ ಕೈಕೊಡುತ್ತಿದೆ. ರಾತ್ರಿ ಎರಡು ಗಂಟೆಗೆ ವಿದ್ಯುತ್ ನೀಡುವುದಾಗಿ ಸಂದೇಶ ಕಳುಹಿಸಿದರೂ ಮಧ್ಯರಾತ್ರಿವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ರೈತರು ಆರೋಪಿಸಿದರು.
ಲೈನ್‌ಮೆನ್, ಸೆಕ್ಷನ್ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಕಚೇರಿ ದೂರವಾಣಿ ಸದಾ ಸ್ವಿಚ್‌ಆಫ್ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ತಮ್ಮ ಅಹವಾಲು ಯಾರಿಗೆ ಸಲ್ಲಿಸಬೇಕು ಎಂದು ಪ್ರಶ್ನಿಸಿದರು.
ಒಂದು ಟ್ರಾನ್ಸ್‌ಫಾರ್ಮರ್‌ಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ವಿದ್ಯುತ್ ಸಂಪರ್ಕಗಳನ್ನು ನೀಡಿರುವುದರಿಂದ ಮೊದಲು ಮೋಟಾರ್ ಚಾಲನೆ ಮಾಡಿದವರಿಗೆ ಮಾತ್ರ ನೀರು ದೊರೆಯುತ್ತಿದ್ದು, ಉಳಿದವರು ಚಾಲನೆ ಮಾಡಿದ ಕೂಡಲೇ ಟ್ರಿಪ್ ಆಗುತ್ತಿದೆ. ನಿಯಮ ಉಲ್ಲಂಘಿಸಿ ಹಣ ಪಡೆದು ಬೇಕಾಬಿಟ್ಟಿ ಸಂಪರ್ಕಗಳನ್ನು ನೀಡಲಾಗಿದೆ ಎಂದು ರೈತರು ಗಂಭೀರ ಆರೋಪ ಮಾಡಿದರು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಇಇ ಆಂಜನೇಯಪ್ಪ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರೂ, ರೈತರ ಆಕ್ರೋಶಕ್ಕೆ ಗುರಿಯಾದರು. ನೀರಿನ ಕೊರತೆಯಿಂದ ಮೆಕ್ಕೆಜೋಳ ಸೇರಿದಂತೆ ಬೆಳೆಗಳು ಒಣಗುತ್ತಿದ್ದು, ರೈತರ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ಸೂಚಿಸಿ, ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ, ಲೋಕೇಶ ಸುತಾರ ಸೇರಿದಂತೆ ಹಲವರು ಹಾಜರಿದ್ದರು.
ಪ್ರತಿಭಟನೆಯಲ್ಲಿ ಹರದಗಟ್ಟಿ, ಆಡರಕಟ್ಟಿ, ಮುನಿಯನ ತಾಂಡಾ, ಉಂಡೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರಾದ ಇಮಾಮಹುಸೇನ ದೊಡ್ಡಮನಿ, ಸುರೇಶ ಮಾಳಗಿಮನಿ, ರಾಮಪ್ಪ ಲಮಾಣಿ, ನೂರಅಹ್ಮದ ದೊಡ್ಡಮನಿ, ರವಿ ಲಮಾಣಿ, ಮಹಮ್ಮದಸಾಬ್ ದೊಡ್ಡಮನಿ, ಶಿವಪ್ಪ ಲಮಾಣಿ, ಬಸವರಾಜ ಲಮಾಣಿ, ಕೃಷ್ಣಾ ಲಮಾಣಿ, ಸೋಮು ಉಮಚಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರತಿಭಟನೆ ವೇಳೆ ಕೆಲ ರೈತರು ವಿಷದ ಬಾಟಲಿಗಳನ್ನು ಹಿಡಿದು ಬಂದಿದ್ದು, ಪರಿಸ್ಥಿತಿ ಗಂಭೀರವಾಗುವ ಮುನ್ನ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು.
“ಈ ಬಾರಿ ಮಳೆ ಇಲ್ಲದೆ ಈಗಾಗಲೇ ಕಂಗಾಲಾಗಿದ್ದೇವೆ. ಉಳಿದಿರುವ ಸ್ವಲ್ಪ ಬೆಳೆಯನ್ನಾದರೂ ನೀರಾವರಿ ಮೂಲಕ ಉಳಿಸಿಕೊಳ್ಳಬೇಕೆಂದರೆ ಅದಕ್ಕೂ ಅವಕಾಶವಿಲ್ಲದಂತಾಗಿದೆ. ವಿದ್ಯುತ್ ಪೂರೈಕೆ ಮಾಡುವವರು ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಬೆಳೆಗಳು ಕಣ್ಣೆದುರೇ ಒಣಗುತ್ತಿವೆ. ನಾವೇ ರೈತರು ಬೆಳೆ ಬೆಳೆಯದಿದ್ದರೆ ನೀವೇನು ತಿನ್ನುತ್ತೀರಾ? ನಮಗೆ ಇಂತಹ ವಿದ್ಯುತ್ ಸಂಪರ್ಕವೇ ಬೇಡ, ಎಲ್ಲವನ್ನೂ ಕಿತ್ತುಕೊಂಡು ಹೋಗಿ.”
– ದೇವಪ್ಪ ಲಮಾಣಿ (ಮಾಳಗಿಮನಿ), ರೈತ, ಹರದಗಟ್ಟಿ



