ವಿಜಯಸಾಕ್ಷಿ ಸುದ್ದಿ, ಗದಗ: ಬಂಜಾರ ಸಮುದಾಯದ ಪ್ರಭಾವಿ ಯುವ ಮುಖಂಡ ಐ.ಎಸ್. ಪೂಜಾರ ಅವರು ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 12 ವರ್ಷಗಳ ಆಡಳಿತ, ಅಭಿವೃದ್ಧಿ ಪರ ದೃಷ್ಟಿಕೋನ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಯುವ ನಾಯಕತ್ವದಿಂದ ಪ್ರೇರಿತರಾಗಿ ಪಕ್ಷ ಸೇರ್ಪಡೆಯಾಗಿರುವುದಾಗಿ ಐ.ಎಸ್. ಪೂಜಾರ ತಿಳಿಸಿದ್ದಾರೆ.
ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ತಮ್ಮ ಅಪಾರ ಬೆಂಬಲಿಗರು, ಸಮಾಜದ ಮುಖಂಡರು ಹಾಗೂ ಕ್ಷೇತ್ರದ ಪ್ರಮುಖ ನಾಯಕರೊಂದಿಗೆ ಪಕ್ಷ ಸೇರಿರುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ತಳ್ಳಿಕೇರಿ, ಶಿರಹಟ್ಟಿ ಬಂಜಾರ ಸಮಾಜದ ಅಧ್ಯಕ್ಷ ಶಿವಣ್ಣ ಲಮಾಣಿ, ಕಾರ್ಯದರ್ಶಿ ಪುಂಡಲೀಕ ಲಮಾಣಿ, ಬಿಜೆಪಿ ಮುಖಂಡರಾದ ಥಾವರೆಪ್ಪ ಲಮಾಣಿ ಹಾಗೂ ದೇವಿಹಾಳದ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



