ವಿಜಯಸಾಕ್ಷಿ ಸುದ್ದಿ, ಗದಗ: ಬಳ್ಳಾರಿ–ಹೊಸಪೇಟೆ–ಕೊಪ್ಪಳ–ಗದಗ–ಹುಬ್ಬಳ್ಳಿ ಹಾಗೂ ಬಾಗಲಕೋಟೆ–ವಿಜಯಪುರ ಮಾರ್ಗಗಳಲ್ಲಿ ರೈಲುಗಳ ಸಂಖ್ಯೆ ತೀರಾ ಕಡಿಮೆಯಿರುವುದರಿಂದ ಈ ಭಾಗದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಈ ಮಾರ್ಗಗಳಲ್ಲಿ ಹೆಚ್ಚಿನ ಹೊಸ ರೈಲುಗಳನ್ನು ಆರಂಭಿಸುವಂತೆ ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಅವರಿಗೆ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಮನವಿ ಸಲ್ಲಿಸಿದರು.
ಬಳ್ಳಾರಿಯಿಂದ ಹುಬ್ಬಳ್ಳಿ ಮಾರ್ಗಕ್ಕೆ ಮುಂಜಾನೆ ಕೆಲವೇ ರೈಲುಗಳಿದ್ದು, ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಪ್ರಯಾಣಿಕರಿಗೆ ಸೂಕ್ತ ರೈಲು ಸಂಪರ್ಕ ಇಲ್ಲದಿರುವುದು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ವೇಳೆಯಲ್ಲಿಯೂ ಹೊಸ ರೈಲುಗಳನ್ನು ಓಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕುಷ್ಟಗಿ, ಗಂಗಾವತಿ ಹಾಗೂ ಸಿಂಧನೂರು ಭಾಗಕ್ಕೂ ರೈಲು ಸಂಚಾರದ ಕೊರತೆ ಇರುವುದರಿಂದ ಈ ಭಾಗಗಳಿಗೂ ಹೊಸ ರೈಲು ಸೇವೆ ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ.
ಬೆಂಗಳೂರು–ರಾಯದುರ್ಗ–ಬಳ್ಳಾರಿ–ಹೊಸಪೇಟೆ–ಕೊಪ್ಪಳ–ಗದಗ–ಹುಬ್ಬಳ್ಳಿ–ಬಾಗಲಕೋಟೆ–ವಿಜಯಪುರ ಮಾರ್ಗದಲ್ಲಿ ಹೊಸ ರೈಲುಗಳನ್ನು ಸಂಚರಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಬೆಳವಣಿಗೆಗೂ ಉತ್ತೇಜನ ಸಿಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈಗಾಗಲೇ ಗದಗ–ಸೊಲ್ಲಾಪುರ ರೈಲು ಮಾರ್ಗ ದ್ವಿಪಥವಾಗಿರುವ ಹಿನ್ನೆಲೆಯಲ್ಲಿ ಗದಗವನ್ನು ಪ್ರಮುಖ ರೈಲು ಜಂಕ್ಷನ್ ಆಗಿ ಅಭಿವೃದ್ಧಿಪಡಿಸಿ, ಮುಂಬೈ, ಪುಣೆ, ಅಹಮದಾಬಾದ್, ಜೈಪುರ, ದೆಹಲಿ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಬೇಕೆಂದು ಸಂಸದರಿಗೆ ಮನವಿ ಮಾಡಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಗದೀಶ ಕಂಗೂರಿ, ವೆಂಕಟೇಶ ಕಬಾಡಿ, ವೀರಭದ್ರಪ್ಪ ಕಬ್ಬಿಣದ, ಬಸವರಾಜ ಜರತಕನಿ, ರಜಾಕ್ ನೂರಭಾಷ ಸೇರಿದಂತೆ ಗದಗ ಜಿಲ್ಲಾ ವಿಕಾಸ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
“ಬಳ್ಳಾರಿ–ಕೊಪ್ಪಳ–ಗದಗ–ಹುಬ್ಬಳ್ಳಿ ಮಾರ್ಗದಲ್ಲಿ ಹೊಸ ರೈಲುಗಳನ್ನು ಆರಂಭಿಸಿದರೆ ಈ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಅನುಕೂಲವಾಗಲಿದೆ.”
– ವಿಶ್ವನಾಥ ಖಾನಾಪೂರ



