ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಜುಲೈ 26ರಂದು ನರೇಗಲ್ಲದಲ್ಲಿ ನಿವೃತ್ತ ಸೈನಿಕರ ಸಂಘದ ವತಿಯಿಂದ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ತಿಳಿಸಿದರು.
ಪಟ್ಟಣದ ನಿವೃತ್ತ ಸೈನಿಕರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ದೇಶ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧರ ತ್ಯಾಗವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಎಲ್ಲ ನಿವೃತ್ತ ಸೈನಿಕರು ಸಮವಸ್ತ್ರದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತರಬೇಕು ಎಂದು ಮನವಿ ಮಾಡಿದರು.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಒಳನುಸುಳುವಿಕೆ ಯತ್ನವನ್ನು ಭಾರತೀಯ ಸೈನಿಕರು ಧೈರ್ಯದಿಂದ ಹಿಮ್ಮೆಟ್ಟಿಸಿ ದೇಶದ ಗಡಿಯನ್ನು ರಕ್ಷಿಸಿದ ಸಾಹಸವನ್ನು ಸ್ಮರಿಸಿದ ಅವರು, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವ ಹಾಗೂ ಯೋಧರ ಶೌರ್ಯ ದೇಶದ ಇತಿಹಾಸದಲ್ಲಿ ಅಜರಾಮರವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಮೇಜರ್ ರಾಮಣ್ಣ ಸಕ್ರೋಜಿ ಹಾಗೂ ಸಂಘದ ಸದಸ್ಯ ದಾವಲಸಾಬ ಕಿಲ್ಲೇದಾರ ಅವರ ತಾಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸದಸ್ಯರು ಅಗಲಿದವರ ಸೇವೆಯನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.
ಗಾಂಧಿ ಭವನ ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿ ₹3.50 ಲಕ್ಷ ಅನುದಾನ ಮಂಜೂರು ಮಾಡಿರುವುದಕ್ಕೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಚಂದ್ರಶೇಖರ ಹರ್ತಿ ಅವರು ₹16,400 ಮೌಲ್ಯದ ಪಿಎ ವ್ಯವಸ್ಥೆ ಕೊಡುಗೆಯಾಗಿ ನೀಡಿದ್ದಕ್ಕಾಗಿ ಅವರನ್ನು ಅಭಿನಂದಿಸಲಾಯಿತು. ಮೇಜರ್ ರಾಮಣ್ಣ ಸಕ್ರೋಜಿ ಅವರ ನಿಧನದಿಂದ ತೆರವಾದ ಗೌರವಾಧ್ಯಕ್ಷ ಸ್ಥಾನಕ್ಕೆ ಶರಣಪ್ಪ ನಾಶಿಪುಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹೊಸ ಸದಸ್ಯ ಆನಂದ ರಾಚನಗೌಡರ ಅವರನ್ನು ಸಂಘಕ್ಕೆ ಬರಮಾಡಿಕೊಳ್ಳಲಾಯಿತು.
ಸಭೆಯಲ್ಲಿ ಶಿವಪ್ಪ ಶಿವಾಪುರ, ಸಂಗಪ್ಪ ಕುಷ್ಟಗಿ, ರಾಮಪ್ಪ ರೋಣದ, ಕುಮಾರಸ್ವಾಮಿ ಕೋರಧಾನ್ಯಮಠ, ಪ್ರಭುದೇವ ಮುಕ್ಕನಗೌಡ್ರ, ಮಂದಾಲಪ್ಪ ಸಂಗನಾಳ, ಗುರುಶಾಂತಗೌಡ ಮಲ್ಲನಗೌಡ್ರ, ಸಿದ್ರಾಮಪ್ಪ ಕಟ್ಟಿಮನಿ, ಮಲ್ಲಪ್ಪ ಕಡೆತೋಟದ, ಉಮೇಶ ಕರಮುಡಿ, ಈರಪ್ಪ ದೊಡ್ಡಣ್ಣವರ, ಶಿವಾನಂದ ಬಂಡಿಹಾಳ, ಬಸವೇಶ್ವರ ಚಿಕ್ಕೊಪ್ಪದ, ಈಶ್ವರಚಂದ್ರ ಬಾಗಲಿ, ಬಸವರಾಜ ಯಕ್ಕುಂಡಿ, ಸುಮಿತ್ರಾ ದಳವಾಯಿ, ಬಸವರಾಜ ಕಡೆತೋಟದ, ಇಮಾಮಸಾಬ ಕೋಲಕಾರ, ಮಲ್ಲಮ್ಮ ಭೈರಗೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಕಾರ್ಗಿಲ್ ವಿಜಯೋತ್ಸವವು ದೇಶಭಕ್ತಿಯ ಸಂಕೇತ. ಯುವ ಪೀಳಿಗೆಗೆ ಯೋಧರ ತ್ಯಾಗದ ಅರಿವು ಮೂಡಿಸಲು ಎಲ್ಲ ನಿವೃತ್ತ ಸೈನಿಕರು ಸಮವಸ್ತ್ರದಲ್ಲಿ ಭಾಗವಹಿಸಬೇಕು.”
– ಶಿವಪುತ್ರಪ್ಪ ಸಂಗನಾಳ, ಅಧ್ಯಕ್ಷರು, ನಿವೃತ್ತ ಸೈನಿಕರ ಸಂಘ



