ವಿಜಯಸಾಕ್ಷಿ ಸುದ್ದಿ, ಅಳ್ನಾವರ/ಧಾರವಾಡ: ಉತ್ತರ ಕರ್ನಾಟಕದ ಪ್ರಮುಖ ರೈಲು ಜಂಕ್ಷನ್‌ಗಳಲ್ಲಿ ಒಂದಾದ ಅಳ್ನಾವರ ರೈಲು ನಿಲ್ದಾಣ ಈಗ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೊಸ ರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆ ಅಡಿಯಲ್ಲಿ ₹17.20 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಂಡ ನಿಲ್ದಾಣವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶದಾದ್ಯಂತ 75 ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಿದರು.
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಿಂದ ಭಾರತ ಹೊಸ ಎತ್ತರಕ್ಕೆ ಏರುತ್ತಿದ್ದು, ಹೈಡ್ರೋಜನ್ ರೈಲು ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ ಬಂಟ್ವಾಳ, ಬಾದಾಮಿ, ಕೊಪ್ಪಳ ಹಾಗೂ ಅಳ್ನಾವರ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯಾಣಿಕರಿಗೆ ವಿಶ್ವಮಟ್ಟದ ಸೌಲಭ್ಯಗಳನ್ನು ಒದಗಿಸುವ ಮೂಲಕ ರೈಲು ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲಾಗಿದೆ ಎಂದರು.
ಪುನರಾಭಿವೃದ್ಧಿ ಕಾಮಗಾರಿಯಡಿ ನಿಲ್ದಾಣದ ಮುಖ್ಯ ಕಟ್ಟಡ, ಪ್ರವೇಶ ದ್ವಾರ, ವಾಹನ ನಿಲುಗಡೆ ಪ್ರದೇಶ, ಡಿಜಿಟಲ್ ಟಿಕೆಟ್ ಕೌಂಟರ್, ಹವಾನಿಯಂತ್ರಿತ ನಿರೀಕ್ಷಣಾ ಕೊಠಡಿಗಳು, ಮಹಿಳೆಯರಿಗಾಗಿ ಪ್ರತ್ಯೇಕ ಸ್ತನ್ಯಪಾನ ಕೊಠಡಿ, ಎಕ್ಸಿಕ್ಯೂಟಿವ್ ಲೌಂಜ್, ಆಧುನಿಕ ಶೌಚಾಲಯಗಳು ಹಾಗೂ ಹೊಸ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಪ್ರದೀಪ ಶೆಟ್ಟರ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ನೈರುತ್ಯ ರೈಲ್ವೆ ಮಹಾಪ್ರಬಂಧಕ ಅನಂತ್ ಪಿ. ಸೇರಿದಂತೆ ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹೈಟೆಕ್ ಸೌಲಭ್ಯಗಳ ಹೊಸ ಲೋಕ
ಎರಡು ಲಿಫ್ಟ್‌ಗಳು • 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ • ದಿವ್ಯಾಂಗ ಸ್ನೇಹಿ ರ್ಯಾಂಪ್‌ಗಳು • ಟ್ಯಾಕ್ಟೈಲ್ ಟೈಲ್ಸ್ • ಹವಾನಿಯಂತ್ರಿತ ನಿರೀಕ್ಷಣಾ ಕೊಠಡಿಗಳು • ಡಿಜಿಟಲ್ ಮಾಹಿತಿ ಫಲಕಗಳು • ಉಚಿತ ಹೈ-ಸ್ಪೀಡ್ ವೈ-ಫೈ • ವಿಶಾಲ ಪಾರ್ಕಿಂಗ್ ವ್ಯವಸ್ಥೆ
“ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಿಂದ ದೇಶದ ಸಮಗ್ರ ಪ್ರಗತಿಗೆ ಹೊಸ ವೇಗ ಸಿಕ್ಕಿದೆ. ಭಾರತ ಈಗ ಹೈಡ್ರೋಜನ್ ರೈಲು ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಸಶಕ್ತ ಹಾಗೂ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತಿದೆ.”
— ಥಾವರ್ ಚಂದ್ ಗೆಹ್ಲೋಟ್, ರಾಜ್ಯಪಾಲ



