ವಿಜಯಸಾಕ್ಷಿ ಸುದ್ದಿ, ಧಾರವಾಡ: ವರ್ಷಗಳ ಕಾಲ ದೂರವಾಗಿದ್ದ ದಂಪತಿಗಳನ್ನು ಮತ್ತೆ ಒಂದಾಗಿಸುವಲ್ಲಿ ಧಾರವಾಡ ಕುಟುಂಬ ನ್ಯಾಯಾಲಯ ಮಹತ್ವದ ಯಶಸ್ಸು ಸಾಧಿಸಿದೆ. ರಾಜಿ ಸಂಧಾನ ಪ್ರಕ್ರಿಯೆಯಲ್ಲಿ 55 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅವುಗಳಲ್ಲಿ 15 ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಹೊಸ ಬದುಕು ಆರಂಭಿಸಲು ನಿರ್ಧರಿಸಿದ್ದಾರೆ.
ಪುನರ್ಮಿಲನಗೊಂಡ ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟರು. ಕುಟುಂಬ ಸದಸ್ಯರು, ನ್ಯಾಯಾಧೀಶರು ಹಾಗೂ ನ್ಯಾಯಾಲಯದ ಸಿಬ್ಬಂದಿ ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ್ ಮಾತನಾಡಿ, ರಾಜಿ ಸಂಧಾನದ ಮೂಲಕ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ಮುಂದುವರಿಸಲು ಒಪ್ಪಿಕೊಂಡಿದ್ದು, ಸಂತೋಷದಿಂದ ಮನೆಗಳಿಗೆ ತೆರಳಿದ್ದಾರೆ ಎಂದು ತಿಳಿಸಿದರು.
ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ನಾಗರಾಜಪ್ಪ ಎ.ಕೆ. ಅವರ ಮಾಹಿತಿ ಪ್ರಕಾರ, ಪುನರ್ಮಿಲನಗೊಂಡ ದಂಪತಿಗಳಲ್ಲಿ ಕೆಲವರು 5, 10 ಹಾಗೂ 16 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೇವಲ ಮೂರು ತಿಂಗಳ ಸಂಸಾರದ ಬಳಿಕ ದೂರವಾಗಿದ್ದ ದಂಪತಿಯೂ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿರುವುದು ವಿಶೇಷವಾಗಿದೆ.
ದಾಂಪತ್ಯದಲ್ಲಿ ಸಂವಾದ, ಹೊಂದಾಣಿಕೆ ಮತ್ತು ಪರಸ್ಪರ ವಿಶ್ವಾಸದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟ ಪರಿಣಾಮ ಈ ಯಶಸ್ಸು ಸಾಧ್ಯವಾಗಿದೆ. ವಕೀಲರು ಹಾಗೂ ನ್ಯಾಯಾಂಗದ ಸಹಕಾರದಿಂದ ರಾಜಿ ಸಂಧಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು, ಹಲವು ಕುಟುಂಬಗಳಲ್ಲಿ ಮತ್ತೆ ಸಂತಸ ಮೂಡಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅಲ್ಲಪ್ಪ ಎಂ. ಬಡಿಗೇರ ಸೇರಿದಂತೆ ವಕೀಲರು ಉಪಸ್ಥಿತರಿದ್ದರು.
“ಕೌಟುಂಬಿಕ ಸಮಸ್ಯೆಗಳು ಎಲ್ಲರ ಬದುಕಿನಲ್ಲೂ ಬರುತ್ತವೆ. ಆದರೆ ಪರಸ್ಪರ ಅರ್ಥೈಸಿಕೊಳ್ಳುವ ಮನೋಭಾವ ಇದ್ದರೆ ಯಾವುದೇ ಭಿನ್ನಾಭಿಪ್ರಾಯವನ್ನು ನಿವಾರಿಸಿಕೊಂಡು ಸುಖೀ ಜೀವನ ನಡೆಸಬಹುದು.”
– ನಾಗರಾಜಪ್ಪ ಎ.ಕೆ., ನ್ಯಾಯಾಧೀಶರು, ಕುಟುಂಬ ನ್ಯಾಯಾಲಯ



