HomeGadag Newsನಕಲಿ ಮತದಾರರ ಸೇರ್ಪಡೆಗೆ ಕಾಂಗ್ರೆಸ್ ಕುಮ್ಮಕ್ಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನಕಲಿ ಮತದಾರರ ಸೇರ್ಪಡೆಗೆ ಕಾಂಗ್ರೆಸ್ ಕುಮ್ಮಕ್ಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡು ನುಸುಳುಕೋರರು ಹಾಗೂ ನಕಲಿ ಮತದಾರರನ್ನು ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ನಿಯಮಗಳನ್ನು ಸಡಿಲಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಯಾವುದೇ ಕಾನೂನಾತ್ಮಕ ದಾಖಲೆಗಳಿಲ್ಲದೆ ಮೌಖಿಕ ಸಾಕ್ಷ್ಯದ ಆಧಾರದ ಮೇಲೆ ಪ್ರಮಾಣಪತ್ರ ನೀಡಲು ಅವಕಾಶ ಕಲ್ಪಿಸಿರುವುದು ನಕಲಿ ಮತದಾರರ ಸೇರ್ಪಡೆಗೆ ದಾರಿ ಮಾಡಿಕೊಡಲಿದೆ ಎಂದು ದೂರಿದರು.

ರಾಜ್ಯದ ಶೇ.80ರಿಂದ 90ರಷ್ಟು ಮನೆಗಳಿಗೆ ಎಸ್‌ಐಆರ್ ನಮೂನೆಗಳು ತಲುಪಿವೆ ಎಂಬ ಅಧಿಕಾರಿಗಳ ಹೇಳಿಕೆ ವಾಸ್ತವಕ್ಕೆ ದೂರವಾಗಿದೆ. ಅನೇಕ ಕಡೆಗಳಲ್ಲಿ ಬಿಎಲ್‌ಒಗಳು ಮನೆಮನೆಗೆ ತೆರಳಿ ನಮೂನೆ ವಿತರಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಆಡಳಿತಕ್ಕೆ ಬಂದಾಗಲೆಲ್ಲ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗುತ್ತವೆ ಎಂದು ಆರೋಪಿಸಿದ ಜೋಶಿ, ಹಾನಗಲ್ ಘಟನೆ ಹಾಗೂ ಮಾದಕ ವಸ್ತುಗಳ ಜಾಲದ ಬಗ್ಗೆ ಸರ್ಕಾರದ ಮೌನವನ್ನು ಪ್ರಶ್ನಿಸಿದರು.

ಕೆಪಿಎಸ್‌ಸಿ ಸಂವಿಧಾನಬದ್ಧ ಸಂಸ್ಥೆಯಾಗಿದ್ದು, ಅದರಲ್ಲಿರುವ ಲೋಪಗಳನ್ನು ಸರಿಪಡಿಸಬೇಕೇ ಹೊರತು ಸಂಸ್ಥೆಯನ್ನೇ ದುರ್ಬಲಗೊಳಿಸುವುದು ಸರಿಯಲ್ಲ ಎಂದು ಹೇಳಿದರು. ಆರ್‌ಎಸ್‌ಎಸ್ ಕುರಿತು ಕೇಳಿದ ಪ್ರಶ್ನೆಗೆ, ಶತಮಾನದ ಇತಿಹಾಸವಿರುವ ಸಂಘಟನೆ ತನ್ನ ಬಗ್ಗೆ ತಾನೇ ಉತ್ತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಮುರಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಇದ್ದರು.

ಮಂತ್ರಿಮಂಡಲ ವಿಳಂಬಕ್ಕೆ ಟೀಕೆ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 40 ದಿನಗಳಾದರೂ ಸಚಿವ ಸಂಪುಟ ವಿಸ್ತರಣೆ ಆಗದಿರುವುದನ್ನು ಟೀಕಿಸಿದ ಜೋಶಿ, ಕಾಂಗ್ರೆಸ್ ಆಡಳಿತದಲ್ಲಿ ಸಮನ್ವಯದ ಕೊರತೆ ಸ್ಪಷ್ಟವಾಗಿದೆ. ಆಡಳಿತದ ಜವಾಬ್ದಾರಿಗಿಂತ ರಾಜಕೀಯ ಗೊಂದಲವೇ ಹೆಚ್ಚಾಗಿದೆ ಎಂದು ಲೇವಡಿ ಮಾಡಿದರು.

“ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಕಾಂಗ್ರೆಸ್ ನುಸುಳುಕೋರರು ಹಾಗೂ ನಕಲಿ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಸುತ್ತಿದೆ.”

– ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img