ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸೇವೆಯಿಂದ ನಿವೃತ್ತರಾದ ಬಳಿಕವೂ ಶಾಲೆ ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರೀತಿಯನ್ನು ಉಳಿಸಿಕೊಂಡಿರುವ ಪಟ್ಟಣದ ಬಸ್ತಿಬಣದ ಸಿ.ಎಸ್. ಪಿಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ವಿ.ಕೆ. ಪೂಜಾರ ಅವರು ಶಾಲೆಯ 95ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಶನಿವಾರ ಧರಿಸುವ ಸಮವಸ್ತ್ರಗಳನ್ನು ವಿತರಿಸಿ ಮಾದರಿಯಾದರು.
ಶಾಲೆಯಲ್ಲಿ ಗುರುವಾರ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಗೌರವವಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಾಲೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೂ ವಿದ್ಯಾರ್ಥಿಗಳ ಮೇಲಿನ ಮಮಕಾರದಿಂದ ಸಾವಿರಾರು ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ ವಿತರಿಸಿರುವ ವಿ.ಕೆ. ಪೂಜಾರ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕಿ ವಿ.ಕೆ. ಪೂಜಾರ ಮಾತನಾಡಿ, ಇದೇ ಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸುವ ಅವಕಾಶ ನೀಡಿದ ಶಿಕ್ಷಣ ಇಲಾಖೆ, ಎಸ್‌ಡಿಎಂಸಿ ಹಾಗೂ ಊರಿನ ಹಿರಿಯರಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡುವುದು ಶಿಕ್ಷಕರಿಗೆ ಸಿಗುವ ಅತಿದೊಡ್ಡ ಬಹುಮಾನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಆರ್.ಬಿ. ಜೋಶಿ, ದೈಹಿಕ ಶಿಕ್ಷಣಾಧಿಕಾರಿ ಎಲ್.ಟಿ. ಪಾಟೀಲ, ಸಿಆರ್‌ಪಿ ಉಮೇಶ ನೇಕಾರ, ಮುಖ್ಯೋಪಾಧ್ಯಾಯ ಕೆ.ಡಿ. ಕಗ್ಗಲಗೌಡ್ರ, ನಾಗರಾಜ ಪೂಜಾರ, ಡಿ.ಎನ್. ದೊಡ್ಡಮನಿ, ರಾಜೇಶ್ವರಿ ಅಡರಕಟ್ಟಿ, ಎನ್.ಎಸ್. ಪಾಟೀಲ, ಎಂ.ಪಿ. ಹರ್ಲಾಪೂರ, ಶಿವಲಿಂಗಯ್ಯ ಹೊತಗಿಮಠ, ದಿಗಂಬರ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಶಿಕ್ಷಕ ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾನೆ ಎಂಬುದಕ್ಕಿಂತ, ವಿದ್ಯಾರ್ಥಿಗಳ ಜೀವನದಲ್ಲಿ ಎಂತಹ ಬದಲಾವಣೆ ತಂದಿದ್ದಾನೆ ಎಂಬುದೇ ಮುಖ್ಯ. ವಿ.ಕೆ. ಪೂಜಾರ ಅವರು ನಿವೃತ್ತಿಯ ಬಳಿಕವೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಮಾದರಿ ಕೆಲಸ ಮಾಡಿದ್ದಾರೆ.”
– ಶಿವರಾಜ ಸೀಮಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ



