ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಪುರಸಭೆ ವ್ಯಾಪ್ತಿಯ ಅರ್ಹ ನಿವಾಸಿಗಳಿಗೆ ಫಾರ್ಮ್-3 ವಿತರಣೆಯನ್ನು ವೇಗಗೊಳಿಸಲು ವಿಶೇಷ ಅಭಿಯಾನ ಕೈಗೊಳ್ಳಬೇಕು ಹಾಗೂ ಸಾಮಾನ್ಯ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಗಣೇಶ್, ಸಾಮಾನ್ಯ ಸಭೆಗಳು ಅಪರೂಪಕ್ಕೆ ನಡೆಯುತ್ತಿದ್ದು, ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಸಮರ್ಪಕ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಜೋಗಿ ಹನುಮಂತಪ್ಪ ಮಾತನಾಡಿ, ತಮ್ಮ ವಾರ್ಡ್‌ನಲ್ಲಿ ಬಹುತೇಕ ಕೊಳಗೇರಿ ಪ್ರದೇಶಗಳಿದ್ದು, 20 ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅನೇಕ ಅರ್ಹ ನಿವಾಸಿಗಳಿಗೆ ಇನ್ನೂ ಫಾರ್ಮ್-3 ವಿತರಿಸಿಲ್ಲ. ಈ ಕುರಿತು ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸದಸ್ಯರಾದ ಬಿ.ಡಿ. ಗಂಗಣ್ಣ, ರಾಜೇಶ್ ಬ್ಯಾಡಗಿ, ಜನ್ನು ನಾಗರಾಜ್ ಹಾಗೂ ಸುರೇಶ್ ಬಣಕಾರ್ ಮಾತನಾಡಿ, ಫಾರ್ಮ್-3 ವಿತರಣೆಗೆ ವಿಶೇಷ ಅಭಿಯಾನ ಹಮ್ಮಿಕೊಂಡು ಅರ್ಹ ಫಲಾನುಭವಿಗಳಿಗೆ ದಾಖಲೆಗಳನ್ನು ವಿತರಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಯನ್ನು ದೀರ್ಘ ಸಮಯ ಓದಲಾಗುತ್ತಿದ್ದ ವೇಳೆ ಸದಸ್ಯ ಮರಿ ರಾಮಣ್ಣ ಆಕ್ಷೇಪ ವ್ಯಕ್ತಪಡಿಸಿ, ಹಳೆಯ ದಾಖಲೆಗಳನ್ನು ಓದುತ್ತಲೇ ಸಮಯ ವ್ಯರ್ಥ ಮಾಡಬಾರದು ಎಂದು ಅಭಿಪ್ರಾಯಪಟ್ಟರು.
ಕಳೆದ ಆಗಸ್ಟ್‌ನಲ್ಲಿ ಸಾಮಾನ್ಯ ಸಭೆ, ಏಪ್ರಿಲ್‌ನಲ್ಲಿ ಬಜೆಟ್ ಸಭೆ ನಡೆದಿದ್ದು, ಅದರ ಬಳಿಕ ಇದೀಗ ಸಭೆ ನಡೆಯುತ್ತಿದೆ. ನಿಯಮದಂತೆ ಪ್ರತಿ ತಿಂಗಳು ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಗಣೇಶ್, ಬಿ.ಡಿ. ಗಂಗಣ್ಣ, ಜೋಗಿ ಹನುಮಂತಪ್ಪ, ನವೀನ್ ಹಾಗೂ ಜನ್ನು ನಾಗರಾಜ್ ಆಗ್ರಹಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಗೈರುಹಾಜರಿಯ ಬಗ್ಗೆಯೂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷೆ ರೇಷ್ಮಾ ಸಿಕಂದರ್, ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಉಪಾಧ್ಯಕ್ಷೆ ನೇತ್ರಾವತಿ ಹುಚ್ಚಪ್ಪ, ಸದಸ್ಯರಾದ ಅಂಬಿಕಾ ದೇವಿಂದ್ರಪ್ಪ, ಮಲ್ಲೇಶ್ವರಿ ಭರತ್, ಚೆನ್ನಮ್ಮ ವಿಜಯಕುಮಾರ್, ಖಾಜಾ ಬನ್ನಿ ಅಲ್ಲಾಭಕ್ಷಿ, ಮಂಜುಳಾ ಕೃಷ್ಣ ನಾಯ್ಕ್, ನಾಮನಿರ್ದೇಶಿತ ಸದಸ್ಯರಾದ ದಾವಣಗೆರೆ ಕೊಟ್ರೇಶ್, ಬಾರಿಕರ ಮಂಜುನಾಥ್, ಬಾಳಪ್ಪ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.
“ಪುರಸಭೆ ವ್ಯಾಪ್ತಿಯ ಎಲ್ಲ ಅರ್ಹ ನಿವಾಸಿಗಳಿಗೆ ಫಾರ್ಮ್-3 ವಿತರಿಸಲು ವಿಶೇಷ ಅಭಿಯಾನ ಕೈಗೊಳ್ಳಲಾಗುವುದು.”
– ರೇಷ್ಮಾ ಸಿಕಂದರ್, ಅಧ್ಯಕ್ಷೆ, ಹಗರಿಬೊಮ್ಮನಹಳ್ಳಿ ಪುರಸಭೆ



