ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆನ್ಸಿ ದಿನಾಚರಣೆಯನ್ನು ವಿಜಯನಗರ ಚಾರ್ಟರ್ಡ್ ಅಕೌಂಟೆಂಟ್ಸ್ ಜಿಲ್ಲಾ ಘಟಕವು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿತು.
ಪಟ್ಟಣದ ಸಾಧ್ಯಾ ಟ್ರಸ್ಟ್ ಫಾರ್ ಸೋಷಿಯಲ್ ಡೆವಲಪ್ಮೆಂಟ್ (ರಿ) ನಡೆಸುತ್ತಿರುವ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಾರ್ಟರ್ಡ್ ಅಕೌಂಟೆಂಟ್ ಸೀನಂ ಭಟ್, ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಚಾರ್ಟರ್ಡ್ ಅಕೌಂಟೆಂಟ್ಗಳ ಪಾತ್ರ ಮಹತ್ವದ್ದಾಗಿದೆ. ಹಣಕಾಸಿನ ಶಿಸ್ತು, ಪಾರದರ್ಶಕತೆ ಹಾಗೂ ನಿಖರ ಲೆಕ್ಕಪತ್ರ ನಿರ್ವಹಣೆಯ ಮೂಲಕ ಉತ್ತಮ ಆಡಳಿತ ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ವಿಶೇಷ ಚೇತನ ಮಕ್ಕಳ ಶಿಕ್ಷಣ, ಆರೈಕೆ, ತರಬೇತಿ ಹಾಗೂ ಸಬಲೀಕರಣಕ್ಕಾಗಿ ಸಾಧ್ಯಾ ಟ್ರಸ್ಟ್ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಶ್ರಮಿಸುವ ಇಂತಹ ಸಂಸ್ಥೆಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಹಣಕಾಸಿನ ಜವಾಬ್ದಾರಿ ಮತ್ತು ಪಾರದರ್ಶಕ ಆಡಳಿತ ಯಾವುದೇ ಸಂಸ್ಥೆಯ ಬೆಳವಣಿಗೆಗೆ ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ಉಳಿತಾಯದ ಮನೋಭಾವ ಹಾಗೂ ಹಣಕಾಸಿನ ಅರಿವನ್ನು ಬಾಲ್ಯದಿಂದಲೇ ಬೆಳೆಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ದಿನಾಚರಣೆಯ ಅಂಗವಾಗಿ ವಿಶೇಷ ಶಾಲೆಗೆ ಎರಡು ನೀರಿನ ಟ್ಯಾಂಕ್ಗಳು, ಅಡುಗೆ ಸಾಮಗ್ರಿಗಳು ಹಾಗೂ ಎರಡು ಚಹಾ ಬಾಕ್ಸ್ಗಳನ್ನು ಕೊಡುಗೆಯಾಗಿ ನೀಡಲಾಯಿತು. ಬಳಿಕ ಚಾರ್ಟರ್ಡ್ ಅಕೌಂಟೆಂಟ್ಸ್ ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಯೋಗಕ್ಷೇಮ ವಿಚಾರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ರವೀಂದ್ರನಾಥ ಗುಪ್ತ, ಸಿಎ ವೀಣಾ, ಸಿಎ ಸರ್ಪಭೂಷಣ, ಜಿ. ಅನಿತಾ, ಶೀಲಾ ರೆಡ್ಡಿ, ಸೋನಿ ಮಹೇಂದ್ರ, ಶ್ರೀಕಾಂತ್, ಜಿ. ವಿನಾಯಕ್, ಗವಿಸಿದ್ದಪ್ಪ, ಮಂಜುನಾಥ್, ಗುಂಡಿ ನಾಗರಾಜ್, ಬೋರಯ್ಯ, ರಾಜೇಶ್, ಶ್ರೀನಿವಾಸ್, ಅನಿಲ್ ಕುಮಾರ್, ಶಾಲೆಯ ಮುಖ್ಯಸ್ಥೆ ಆರತಿ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



