HomeDharwadಪಿಓಪಿ ಗಣೇಶನಿಗೆ ನೋ ಎಂಟ್ರಿ

ಪಿಓಪಿ ಗಣೇಶನಿಗೆ ನೋ ಎಂಟ್ರಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಧಾರವಾಡ: ಗಣೇಶ ಹಬ್ಬದ ಸಂಭ್ರಮದ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶ ಮೂರ್ತಿಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಜಿಲ್ಲೆಯಲ್ಲಿ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಹಾಗೂ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪಿಓಪಿ ಹಾಗೂ ರಾಸಾಯನಿಕ ಅಂಶಗಳಿರುವ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ವಿಸರ್ಜನೆ ನಿಷೇಧ, ಡಿಜೆ ಸೌಂಡ್ ಸಿಸ್ಟಮ್ ಹಾಗೂ ಹಸಿರು ಪಟಾಕಿಗಳ ಬಳಕೆ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಗಣೇಶ ಹಬ್ಬದ ಸಂದರ್ಭದಲ್ಲಿ ಮಿತಿ ಮೀರಿದ ಡಿಜೆ ಸೌಂಡ್ ಸಿಸ್ಟಮ್ ಬಳಕೆ ಕಂಡುಬಂದರೆ ಉಪಕರಣ ಜಪ್ತಿ ಮಾಡಿ ₹1 ಲಕ್ಷದವರೆಗೆ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಡಿಜೆ ಸದ್ದಿನಿಂದ ವೃದ್ಧರು, ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಡಿಜೆ ಬದಲಿಗೆ ಡೊಳ್ಳು ಕುಣಿತ, ಹೆಜ್ಜೆ ಮೇಳ, ಕರಡಿ ಮಜಲು ಸೇರಿದಂತೆ ಸಾಂಪ್ರದಾಯಿಕ ಜನಪದ ಕಲೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಪಿಓಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಬಾರದು. ಅಧಿಕಾರಿಗಳು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ದಿಢೀರ್ ದಾಳಿ ನಡೆಸಿ ಪಿಓಪಿ ಮೂರ್ತಿಗಳು ಕಂಡುಬಂದರೆ ತಕ್ಷಣ ವಶಪಡಿಸಿಕೊಳ್ಳಬೇಕು. ನಿಯಮ ಉಲ್ಲಂಘಿಸುವ ಮಾರಾಟಗಾರರ ವಿರುದ್ಧ ದಂಡ ವಿಧಿಸಬೇಕು ಎಂದು ಸೂಚಿಸಿದರು.

ಪಿಓಪಿ ಮೂರ್ತಿಗಳು ಬೇರೆ ಜಿಲ್ಲೆಗಳಿಂದ ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲೆಯ ಗಡಿ ಹಾಗೂ ಮಹಾನಗರದ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ನಿಯಮ ಉಲ್ಲಂಘಿಸಿ ಸಾಗಾಟ ಮಾಡುವ ವಾಹನಗಳು ಹಾಗೂ ಪಿಓಪಿ ಮೂರ್ತಿಗಳನ್ನು ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು.

ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರಂತರ ತಪಾಸಣೆ ನಡೆಸಬೇಕು. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಬಳಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಮೆರವಣಿಗೆಯ ಮಾರ್ಗವನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ತಿಳಿಸಬೇಕು. ಮಾರ್ಗ ಬದಲಾವಣೆ ಇದ್ದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಇನ್ನು ಗಣೇಶ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ನಿಯಮಾನುಸಾರ ಬಳಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಟಾಕಿ ಸಿಡಿಸಬೇಕು. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಹಬ್ಬ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಎಸ್. ಘಾಳಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಚಲನಚಿತ್ರ ಹಾಡುಗಳನ್ನು ಹಾಕದೆ ದೇವರ ನಾಮಾವಳಿಗಳನ್ನು ಬಳಸಬೇಕು. ಲೇಸರ್ ಲೈಟ್‌ಗಳನ್ನು ಬಳಸಬಾರದು ಎಂದು ಸೂಚಿಸಿದರು.

ಪಾಲಿಕೆ ನಿಯೋಜಿಸಿರುವ ಸಾರ್ವಜನಿಕ ನೀರಿನ ತೊಟ್ಟಿಗಳಲ್ಲಿಯೇ ಗಣೇಶ ಮೂರ್ತಿಗಳನ್ನು ಕಡ್ಡಾಯವಾಗಿ ವಿಸರ್ಜಿಸಬೇಕು. ಮಣ್ಣಿನ ಗಣೇಶ ಮೂರ್ತಿ ತಯಾರಕರಿಗೆ ಪಾಲಿಕೆಯಿಂದ ₹25 ಸಾವಿರ ಪ್ರೋತ್ಸಾಹ ಧನ ಹಾಗೂ ಸನ್ಮಾನ ನೀಡಲಾಗುವುದು. ಮನೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸಾರ್ವಜನಿಕರು ಗಣೇಶನ ಛಾಯಾಚಿತ್ರವನ್ನು ಪಾಲಿಕೆಗೆ ಸಲ್ಲಿಸಿದರೆ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.

ಮಣ್ಣಿನ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ಒಂದು ಬಕೆಟ್ ನೀರಿನಲ್ಲಿ ವಿಸರ್ಜಿಸಿ, ಅದೇ ಮಣ್ಣಿನಿಂದ ಗಿಡ-ಸಸಿಗಳನ್ನು ಬೆಳೆಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಶೋಭಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣೇಶ ಮೂರ್ತಿ ತಯಾರಕರು, ಮಾರಾಟಗಾರರು ಹಾಗೂ ಪಟಾಕಿ ಮಾರಾಟಗಾರರು ಭಾಗವಹಿಸಿದ್ದರು.

“ಹಬ್ಬ ಆಚರಿಸುವುದು ನಮ್ಮ ಸಂಸ್ಕೃತಿಯ ಹೆಮ್ಮೆ. ಆದರೆ ಅದು ಪರಿಸರ ಸ್ನೇಹಿಯಾಗಿರಬೇಕು. ನೈಸರ್ಗಿಕ ಮಣ್ಣಿನಿಂದ ತಯಾರಿಸಿದ, ಸುಲಭವಾಗಿ ನೀರಿನಲ್ಲಿ ಕರಗುವ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ. ನಮ್ಮ ಹಬ್ಬ, ನಮ್ಮ ಪರಿಸರ, ನಮ್ಮ ಜವಾಬ್ದಾರಿ. ಸಾರ್ವಜನಿಕರ ಸಹಕಾರವಿಲ್ಲದೆ ಜಿಲ್ಲಾಡಳಿತದ ಈ ಕಾರ್ಯ ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಿಲ್ಲ.”

— ಸ್ನೇಹಲ್ ಆರ್., ಜಿಲ್ಲಾಧಿಕಾರಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img